ಬೆಂಗಳೂರೆಂದರೆ....

Share:
ಬೆರಳೆಣಿಕೆಯ ಅಂಗಡಿಗಳು, ಕೃಷಿ, ಕಾಡುಮೇಡುಗಳಿರುವ ನನ್ನೂರಿಗೂ ಸಾವಿರಾರು ಪಟ್ಟಣಗಳನ್ನು ಅಡ್ಡಾದಿಡ್ಡಿಯಾಗಿ
ಜೋಡಿಸಿಕೊಂಡ ಬೆಂಗಳೂರಿಗೂ ಎಷ್ಟು ಸಾವಿರ ವ್ಯತ್ಯಾಸ ಇರಬಹುದು?

ಹಳ್ಳಿಮನೆಗಳಲ್ಲಿ ಗೋಡೆಗಳಿದ್ದರೂ ಎಲ್ಲೋ ದೂರದ ಮನೆಯ ಸುದ್ದಿ ಹಾಗಂತೆ ಹೀಗಂತೆ ಎಂಬ ಗುಸುಗುಸು ಕೇಳುತ್ತದೆ. ಅಲ್ಲಿ ಸ್ಥಾನಮಾನಕ್ಕೆ ತಕ್ಕಂತೆ ಸಾರ್ವಜನಿಕ ಗೌರವವೂ ದೊರಕುತ್ತದೆ. ಯುಪಿಎಸ್ಸಿ, ಕೆಪಿಎಸ್ಸಿ ಪಾಸಾದರೂ, ಕೆಎಸ್ಆರ್ಟಿಸಿ, ಪೋಸ್ಟಾಪೀಸು, ಅಂಗನವಾಡಿಯಲ್ಲಿ ಕೆಲಸ ಸಿಕ್ಕರೂ ರೆಸ್ಪೆಕ್ಟ್ ಕೊಡುತ್ತಾರೆ. ಅವ ಪೊಲೀಸ್, ಅವ ಮಿಲಿಟ್ರಿ, ಅವಳು ಟೀಚರ್ ಎಂದೆಲ್ಲ ಗುರುತಿಸಿ ಲೆಕ್ಕಕ್ಕಿಂತ ಹೆಚ್ಚೇ ಮರ್ಯಾದೆ ಕೊಡುತ್ತಾರೆ. ಸಮಾಜಕ್ಕೆ ವಿರುದ್ಧವಾಗಿ ನಡೆದರೆ ಹೆಸರು ಬೇಗ ಕೆಟ್ಟು ಹೋಗುತ್ತದೆ. ಅಕ್ರಮ ಸಂಬಂಧ, ಓಡಿಹೋದ ಸುದ್ದಿಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಳ್ಳುತ್ತದೆ. ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಇರುವ ಗುಪ್ತ ಕ್ಯಾಮರಾಗಳ ಹಾಗೆ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮನ್ನು ವಾಚ್ ಮಾಡುವವರು ಇರುತ್ತಾರೆ.

ಆದರೆ ಬೆಂಗಳೂರಿನಲ್ಲಿ ಪಕ್ಕದ ಮನೆಯಲ್ಲಿ ಎಂಜಿನಿಯರ್ ಇದ್ದಾನೋ, ಐಪಿಎಸ್ ಅಧಿಕಾರಿ ಇದ್ದಾನೋ..ದೊಡ್ಡ ಸಿಇಒ ಇದ್ದಾಳೋ, ಎಂಡಿ ಇದ್ದಾನೋ, ಕಳ್ಳನಿದ್ದಾನೋ, ವಿಕೃತಕಾಮಿ ಇದ್ದಾನೋ ಯಾರೂ ತಿಳಿದುಕೊಳ್ಳುವುದಿಲ್ಲ. ಬಸ್ಸಿನಲ್ಲೂ ಅಷ್ಟೇ. ಪಕ್ಕದಲ್ಲಿ ಕುಳಿತವನು ಯಾವ ಕಂಪನಿಯ ಮುಖ್ಯಸ್ಥನೋ, ಯಾವ ಅಧಿಕಾರಿಯೋ ಯಾರಿಗೆ ಗೊತ್ತು. ಎಲ್ಲರ ಮುಖದಲ್ಲಿಯೂ ಅವರವರ ಸಾವಿರ ಚಿಂತೆಗಳು. ಯೋಚನೆಯಲ್ಲಿ ಮಗ್ನವಾಗಿರುವ ದೇಹಗಳು. ಮಹಾನಗರದ ಜನರು ರಿಯಾಲಿಟಿ ಶೋಗಳನ್ನು ಟೀವಿಯಲ್ಲೇ ನೋಡುತ್ತಾರೆ ಹೊರತು ಪಕ್ಕದ ಮನೆಯ ಗೊಡವೆಗೆ ಹೋಗುವುದಿಲ್ಲ.

ಊಟ ತನಗಾಗಿ, ಬಟ್ಟೆ ಪರರಿಗಾಗಿ ಎಂಬಂತೆ ಮಹಾನಗರಗಳ ಜನರು ದಿರಿಸುಗಳ ಒಳಗೆ ಇರುತ್ತಾರೆ. ಬೆಂಗಳೂರಿನಲ್ಲಿ ಹೆದರಬೇಕಾದ್ದು ಸೂಟ್ ಬೂಟ್ ಹಾಕಿಕೊಂಡವರಿಗಲ್ಲ. ಮೇಸ್ಟ್ರು ತರಹ ವರ್ತಿಸುವರಿಗಲ್ಲ. ಜಂಬ ತೋರಿಸುವರಿಗಲ್ಲ. ಇವರೆಲ್ಲ ನಾವು ಬಾಗಿದರೆ ಗುದ್ದುತ್ತಾರೆ... ಹೆದರಿಸಿದರೆ ಪುಕ್ಕಳರಂತೆ ವರ್ತಿಸುತ್ತಾರೆ.

ಆದರೆ ನಗರಗಳಲ್ಲಿ ಭಯಪಡಬೇಕಾದ್ದು ಚಿಂದಿಗಳಂತೆ ಕಾಣುವ ಮನುಷ್ಯರಿಗೆ. ಹರಿದ, ಕೊಳಕು ಬಟ್ಟೆ ಹಾಕಿಕೊಳ್ಳುವವರೇ ಹೆಚ್ಚು ಡೇಂಜರ್. ನಾವು ಯಾವುದೋ ಪೊಸಿಷನ್ ನಲ್ಲಿ ಇದ್ದೇವೆ ಎಂಬ ಅಹಂನಿಂದ ಸ್ಲಂ ಹುಡುಗರಲ್ಲಿ ಜಗಳಕ್ಕೆ ನಿಂತರೆ ಅಪಾಯ. ಮಾರುಕಟ್ಟೆ ಮೌಲ್ಯ 200 ರೂಪಾಯಿ ಇರದ ಮೊಬೈಲ್ ಫೋನ್ ನೀಡದಿದ್ದರೆ ಕಳ್ಳರಿಂದ ಚಾಕು ಹಾಕಿಸಿಕೊಳ್ಳಬೇಕಾಗುತ್ತದೆ. ನಾವು ಕೆಳಗಿಟ್ಟ ಸೂಟ್ ಕೇಸ್ ಮೇಲೆ ಸೆಕುಂಡು ಗಮನ ಕಳೆದುಕೊಂಡರೂ ಸೂಟ್ ಕೇಸನ್ನೇ ಕಳೆದುಕೊಳ್ಳಬೇಕಾಗುತ್ತದೆ. ಊರಲ್ಲಿಯಾದರೆ ಸೂಟ್ ಕೇಸ್ ಎಲ್ಲೋ ಇಟ್ಟು ಟೀ ಕುಡಿದುಬರಬಹುದು. ಮರೆತು ಹೋದರೆ ಯಾರಾದರೂ ಆ ಸೂಟ್ ಕೇಸನ್ನೇ ಮನೆಗೆ ತಲುಪಿಸುತ್ತಾರೆ....

ಊರೆಂದರೆ ಶುಭ್ರ, ನಿರಾಳ, ನಗರವೆಂದರೆ ಟ್ರಾಫಿಕ್, ಜನರ ಸಂತೆ. ಆದರೂ, ಬೆಂಗಳೂರಿನಂತಹ ನಗರವನ್ನು ಬಿಟ್ಟು ಊರಿಗೆ ಹೋದಾಗ ಕಿವಿಯಲ್ಲಿ ಅರಿಯದ ಗುಂಯಿಗುಡುವ ಸದ್ದು ಕೇಳಿಸುತ್ತದೆ. ಊರಿನ ನೀರವತೆ ಕೆಲವೇ ದಿನದಲ್ಲಿ ಬೋರ್ ಹೊಡೆಸುತ್ತದೆ. ಮತ್ತೆ ನಮ್ಮನ್ನು ನಗರ ಕರೆದುಕೊಳ್ಳುತ್ತದೆ.

ನೀನು ಯಾರೋ... ಎಂದು ಕೋಳಿಕೆರಂಗನ ಕೇಳಿದ ಹಾಗೆ ಬೆಂಗಳೂರು ಕೇಳುವುದು ಅಪರೂಪ. ನೀನು ಯಾವ ಜಾತಿ, ಯಾವ ಕುಲ ಎಂದು ಕೇಳಿ ಸೇರಿಸಿಕೊಳ್ಳುವುದಿಲ್ಲ. ಜಾತಿ ನೀಡಿ ಮನೆಯೊಳಗೆ ಪ್ರವೇಶ ಕೊಡುವ ಪದ್ಧತಿ ಅಪರೂಪ. ಹಾಗಂತ ಇಲ್ಲಿ ಜಾತಿಗಳಿಗೆ ಆದ್ಯತೆ ಇಲ್ಲವೆಂದಲ್ಲ. ಇಲ್ಲಿ ಕೆಲವರನ್ನು ಜಾತಿಯೇ ಬೆಳೆಸುತ್ತದೆ, ಜಾತಿಯೇ ಮುಗಿಸುತ್ತದೆ. ಯಾರಿಗೆ ಕಂಪನಿ ಆದ್ಯತೆ ನೀಡುತ್ತದೋ ಆತ ಬೆಳೆಯುತ್ತಾನೆ. ಆದ್ಯತೆ ಪಡೆಯಲು ಕೆಲವೊಮ್ಮೆ ಜಾತಿಯೇ ಸರ್ಟಿಫಿಕೆಟ್ ಆಗುತ್ತದೆ. ಜಾತಿ ಇದ್ದು ಬದುಕಬಹುದು, ಇಲ್ಲದೆಯೂ..

ಬೆಂಗಳೂರಿನಂತಹ ನಗರಗಳಲ್ಲಿ ಸಾವಿರಾರು ಕಂಪನಿಗಳು ಇರುತ್ತವೆ. ಪ್ರತಿಭೆ ಇದ್ದರೆ ಯಾವ ಕಂಪನಿಗಾದರೂ ಎಂಟ್ರಿ ದೊರಕುತ್ತದೆ. ಕೆಲಸ ಮಾಡೋ ಮನಸ್ಸಿದ್ದರೆ ಪ್ರಯತ್ನ ಪಟ್ಟರೆ ನಮಗೆ ಅಚ್ಚರಿಯಾಗುವಂತೆ ಬೆಳೆದುಬಿಡಬಹುದು. ಇಲ್ಲಿ ಬೆಳೆಯಲು ನೇರ ದಾರಿಗಳೂ ಇವೆ. ವಾಮ ಮಾರ್ಗಗಳೂ ಇವೆ. ಗೂಡಂಗಡಿ ಇಟ್ಟವನೂ ಕೋಟ್ಯಾಧಿಪತಿ ಆಗಬಹುದು ಇಲ್ಲಿ.

ಬೆಂಗಳೂರಿನಂತಹ ನಗರಗಳಲ್ಲಿ ಟ್ರಾಫಿಕ್ ಹೆಚ್ಚಾಗಿದೆ, ಮಕ್ಕಳಿಗೆ ಆಡಲು ಸ್ಥಳವಿಲ್ಲ, ಸ್ಕೂಲ್ ಪೀಸು ಜಾಸ್ತಿ, ಬಾಡಿಗೆ ಮನೆಯಲ್ಲಿ ಹೆಚ್ಚು ಸ್ಥಳವಿಲ್ಲ, ಸೈಟ್ ರೇಟ್ ಕೇಳ್ಬೇಡಿ. ಉಸಿರಾಡುವ ಗಾಳಿ ಕೊಂಚ ಹೆಚ್ಚೇ ಮಲೀನವಾಗಿದೆ. ಅಡ್ಜೆಸ್ಟ್ ಮಾಡಿಕೊಳ್ಳಿ.

ಸಮುದ್ರಕ್ಕೆ ನೀರು ಬರುವುದು ನದಿಯಿಂದಲೇ.. ಹಾಗಾಗಿ, ಸಮುದ್ರವನ್ನು ದೂರಿ ಪ್ರಯೋಜನವಿಲ್ಲ.

- Praveen Chandra Puttur

No comments