ನನ್ನ ಬೆಡ್ ಮೇಲೆ ಮೊಟ್ಟೆಯಿಟ್ಟ ಪಾರಿವಾಳ..!

Share:
ವಕೀಲ ಸ್ನೇಹಿತ ಗಡಿಬಿಡಿಯಲ್ಲಿ ಎದ್ದು ಹೈಕೋರ್ಟಿಗೆ ಹೊರಟ ನಂತರ ಕೆಲವು ಗಂಟೆಗಳ ಕಾಲ ನಾನು ರೂಂನಲ್ಲಿ ಒಂಟಿಯಾಗಿರಬೇಕು. ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಕಾರಣ ನನಗೆ ಬೆಳಗ್ಗೆ ಕೊಂಚ ಹೊತ್ತು ಬಿಡುವು ಇರುತ್ತಿತ್ತು. ಆದರೆ ಆ ಬಿಡುವಿನ ಸಮಯವನ್ನು ಒಂಟಿಯಾಗಿ ಕಳೆಯಲು ಬೇಜಾರು. ಆ ಸಮಯದಲ್ಲಿ ನನಗೆ ಪರಿಚಯವಾದಳು.


ಪಕ್ಕದ ಮನೆಯ ಹುಡುಗಿ. ಕಿಟಕಿ ಪಕ್ಕದಲ್ಲೇ ಕುಳಿತರೆ ಅವಳು ಹತ್ತಿರ ಬರುತ್ತಿದ್ದಳು. ಕಿಟಕಿಯಾಚೆಯಿಂದ ನನ್ನನ್ನೇ ಕಣ್ಣು ಮಿಟುಕಿಸದೆ ನೋಡುತ್ತಿದ್ದಳು. ನಾನು ಬೆಡ್ ಮೇಲೆ ಉಲ್ಟಾ ಮಲಗಿ ಅವಳ ಮುಖದ ಮುಂದೆ ಮುಖವಿಟ್ಟು ಗಂಟೆಗಟ್ಟಲೆ ಅವಳ ಕಣ್ಣನ್ನೇ ನೋಡುತ್ತಿದ್ದೆ.

ಸ್ವಲ್ಪ ಹೊತ್ತು ಹೀಗೆ ನೋಡುತ್ತಿದ್ದರೆ ಮನಸ್ಸಿಗೆ ಹಾಯ್ ಅನಿಸುತ್ತಿತ್ತು. ಒಮ್ಮೊಮ್ಮೆ ಅವಳು ಹೂಂ ಹೂಂ ಅಂತ ಹೇಳಿ ನನ್ನಿಂದ ದೂರ ಹಾರಿ ಹೋಗುತ್ತಿದ್ದಳು. ನಾನು ನಿರಾಶೆಯಿಂದ ಕಾಯುತ್ತಿದ್ದೆ.

ನನ್ನನ್ನು ಬೆಳಗ್ಗೆ ಎಂಟು ಗಂಟೆಯ ನಂತರ ನಿದ್ದೆ ಮಾಡಲೇ ಬಿಡುತ್ತಿರಲಿಲ್ಲ. ನಾನು ರಗ್ಗು ಹೊದ್ದು ಮಲಗಿದ್ದಾಗ ನನ್ನ ಕಾಲಿನಿಂದ ತಲೆಯವರೆಗೆ ನನ್ನ ಮೇಲೆಯೇ ಸವಾರಿ ಮಾಡಿ ಎಬ್ಬಿಸುತ್ತಿದ್ದಳು. ಎಚ್ಚರವಾದರೂ ಎಚ್ಚರವಾಗದ ಹಾಗೇ ಮಲಗುತ್ತಿದ್ದೆ. ನಾನು ಎಚ್ಚರವಾಗಿದ್ದೀನಿ ಅಂತ ಸಣ್ಣ ಅಲುಗಾಟ ಕಂಡರೂ ಹಾರಿ ಹೋಗುತ್ತಿದ್ದಳು.


****
4 ತಿಂಗಳ ನಂತರ
****

ಮನೆಗೆ ಬಾ ಅರ್ಜೆಂಟ್, ನಿಂಗೊಂದು ಸರ್ಪ್ರೈಸ್ ಕಾದಿದೆ ಅಂತ ರೂಂಮೇಟ್ ಎಸ್ಎಂಎಸ್ ನೋಡಿ ವೇಗವಾಗಿ ಮನೆಗೆ ಬಂದಿದ್ದೆ. ಬಾಗಿಲು ತೆರೆದು ನೋಡಿದಾಗ ನನಗೆ ಅಚ್ಚರಿ ಕಾದಿತ್ತು. ನನ್ನ ಬೆಡ್ ಮೇಲೆ ಅವಳು ಕುಳಿತುಕೊಂಡಿದ್ದಳು. ಅವಳಿಗೆ ಪ್ರಸವ ಆಗಿತ್ತು. ಇದೇನು ವಿಪರ್ಯಾಸ.....! ಕಣ್ಣು ಕಣ್ಣು ನೋಡಿದ್ದಕ್ಕೆ ಇದೇಂಥ ಶಿಕ್ಷೆ...!

ಪಕ್ಕದಲ್ಲಿದ್ದ ಸ್ನೇಹಿತ ನನ್ನೆಡೆಗೆ ಒಂದು ಅನುಮಾನದ ದೃಷ್ಟಿ ಬೀರಿದ. ಎಷ್ಟಾದರೂ ವಕೀಲ...

ಕಿಟಕಿ ಪಕ್ಕವಿರುವ ನನ್ನ ಬೆಡ್ ಮೇಲೆ ಅವಳೊಂದು ಪುಟ್ಟ ಮೊಟ್ಟೆಯಿಟ್ಟಿದ್ದಳು. ಪಕ್ಕದಲ್ಲೇ ಅವಳು ಕುಳಿತುಕೊಂಡಿದ್ದಳು. ನನ್ನ ದಿಂಬು ಪಕ್ಕ ಮೊಟ್ಟೆಯಿಟ್ಟ ಅವಳಿಗಿನ್ನೂ ನಾನು ಹೆಸರಿಟ್ಟಿಲ್ಲ. ಅವಳೊಂದು ಚಂದದ ಪಾರಿವಾಳ. ಕಪ್ಪು, ಬೂದು ಬಣ್ಣದ ನನ್ನ ಗೆಳತಿ.
ನಾವು ಇಲ್ಲದ ಸಮಯದಲ್ಲಿ ತೆರೆದ ಕಿಟಕಿ ಪ್ರವೇಶಿಸಿದ ಪಾರಿವಾಳ ಮೊಟ್ಟೆಯಿಟ್ಟಿತ್ತು.

ನಾನಿನ್ನು ಪೂರ್ತಿ ಸಾವರಿಸಿಕೊಂಡಿರಲಿಲ್ಲ. ಅನುಮಾನ ಪಡುತ್ತಲೇ ಪಾರಿವಾಳದ ಸನಿಹಕ್ಕೆ ಹೋದೆ. ಭಯಗೊಂಡಳು. ಮೆಲ್ಲಗೆ ಸರಿದು ಮೊಟ್ಟೆಯ ಮೇಲೆ ಕುಳಿತುಕೊಂಡಳು. ರೂಂಮೇಟ್ ಜೋರಾಗಿ ನಕ್ಕ. ನೀನಿವತ್ತು ಚಾಪೆ ಮೇಲೆ ಮಲಗು, ಅದು ಮರಿಯಾಗುವ ತನಕ ಅಂದ...

ಮೆಲ್ಲಗೆ ಅದರ ಮೈ ಸವರಿದೆ. ನಡುಗಿದಳು. ದೂರ ಸರಿದಳು. ಮತ್ತೆ ಸ್ವಲ್ಪ ಹೊತ್ತು ಕಾದೆ. ಹೂಂ ಅಂದೆ. ಹೂಂ ಹೂಂ ಅಂದಿತು ಪಾರಿವಾಳ. ಮತ್ತೆ ಸ್ವಲ್ಪ ಹೊತ್ತು ಕಾದೆ. ಐದು ನಿಮಿಷ, ಹತ್ತು ನಿಮಿಷ.... ಹದಿನೈದು ನಿಮಿಷ...

ಮತ್ತೆ ಮನಸು ತಡೆಯಲಿಲ್ಲ. ಹತ್ತಿರ ಹೋಗಿ ಮೆಲ್ಲಗೆ ಮೈಮುಟ್ಟಲು ಹೋದೆ. ಅಲ್ಲಿಂದ ಹಾರಿ ಬೆಡ್ ನ ಮತ್ತೊಂದು ಅಂಚಿನಲ್ಲಿ ಕುಳಿತುಕೊಂಡಳು. ಮತ್ತೆ ಐದು ನಿಮಿಷ, ಹತ್ತು ನಿಮಿಷ ಕಾದರೂ ಮೊಟ್ಟೆಯ ಹತ್ತಿರ ಬರಲೇ ಇಲ್ಲ.... ಛೇ...!

"ಮೊಟ್ಟೆ ಸ್ವಲ್ಪ ದೊಡ್ಡದಿದ್ದರೆ ಆಮ್ಲೇಟ್ ಮಾಡಬಹುದಿತ್ತು"  ಸ್ನೇಹಿತನ ಮಾತು ಕೇಳಿ ನಗೂ ಬಂದರೂ ತೋರಿಸಿಕೊಡಲಿಲ್ಲ.

ತಕ್ಷಣ ಪ್ರಾಣಿಪ್ರಿಯೆ ಗೆಳತಿಯೊಬ್ಬಳಿಗೆ ಟೆಕ್ಸ್ಟ್ ಮಾಡಿ ವಿಷಯ ತಿಳಿಸಿದೆ. ಪಾರಿವಾಳವನ್ನು ಮೊಟ್ಟೆಯ ಮೇಲೆ ಕೂರಿಸು ಎಂದಳು. ಆದರೆ ಅದು ಕೈಗೆ ಸಿಗಲಿಲ್ಲ. ರೂಂ ಪೂರ್ತಿ ಹಾರತೊಡಗಿತು.

ಸ್ವಲ್ಪ ಹೊತ್ತು ಹೊರಗೆ ಹೋಗೋಣ ಅಂತ ನಾವಿಬ್ಬರು ಹೊರಗೆ ಹೋದೆವು. ಅರ್ಧಗಂಟೆ ಕಳೆದು ವಾಪಸ್ ಬಂದಾಗಲೂ ಪಾರಿವಾಳ ಮೊಟ್ಟೆ ಮೇಲೆ ಕುಳಿತಿರಲಿಲ್ಲ. ನನ್ನ ದಿಂಬು ಮೇಲೆ ಕುಳಿತು ಕಾವು ಕೊಡುತ್ತಿತ್ತು.

ನಾನು ರಟ್ಟಿನ ಬಾಕ್ಸಿನಲ್ಲಿ ಮೊಟ್ಟೆಯಿಟ್ಟರೂ ಅದು ಅತ್ತ ತಿರುಗಿ ನೋಡಲೇ ಇಲ್ಲ. ಮೊಟ್ಟೆಗೆ ಕಾವು ಕೊಡು ಕೊಡು ಅಂದೆ... ಅದಕ್ಕೆ ನನ್ನ ಭಾಷೆ ಅರ್ಥವಾಗಲಿಲ್ಲ. ನಿನಗೆ ಪಾರಿವಾಳದ ಭಾಷೆ ಅರ್ಥವಾಗುತ್ತ ಎಂದು ಸ್ನೇಹಿತೆಗೆ ಎಸ್ಎಂಎಸ್ ಮಾಡಿದೆ. ಅವಳು ಹೂಂ ಹೂಂ ಅಂದಳು.

ನನ್ನ ಯಾವ ಪ್ರಯತ್ನವೂ ವರ್ಕೌಟ್ ಆಗಲಿಲ್ಲ. ಬರೋಬ್ಬರಿ ಮೂರುಗಂಟೆ ಕಾದೆ. ಪಾರಿವಾಳ ಮೊಟ್ಟೆ ಮೇಲೆ ಕುಳಿತುಕೊಳ್ಳಲೇ ಇಲ್ಲ. ಮೊಟ್ಟೆ ಮೇಲೆ ನಾನು ಕುಳಿತುಕೊಳ್ಳುವ ಹಾಗೆಯೂ ಇರಲಿಲ್ಲ :-)

ನನ್ನ ಮನೆಯ ಚೈರ್ ಮೇಲೆ ಕುಳಿತು ಅದು ಪಿಳಿಪಿಳಿ ಕಣ್ಣು ಬಿಡುತ್ತಿದೆ. ಅದರ ಮಾತೃ ಹೃದಯದ ಶಾಪ ನನಗೆ ತಟ್ಟಬಹುದೇ..........!

No comments