ಸ್ಮಾರ್ಟಾದ ಎತ್ತರದ ಹುಡುಗ: ಮಾರುತಿ ವ್ಯಾಗನಾರ್ ಸ್ಟ್ರಿಂಗ್ರೆ

Share:


ಮಾರುತಿ ಸುಜುಕಿ ಕಂಪನಿಯ ಎತ್ತರದ ಹುಡುಗ ಖ್ಯಾತಿಯ ವ್ಯಾಗನಾರ್
ಕಾರು ಇದೀಗ ಸ್ಟಿಂಗ್ರೆ ಹೆಸರಿನಲ್ಲಿ ಹೊಸ ಅವತಾರದಲ್ಲಿ ಆಗಮಿಸಿದೆ. ವ್ಯಾಗನಾರ್ ಸ್ಟಿಂಗ್ರೆ ಕಾರಿನಲ್ಲಿ ಹೊಸತೇನಿದೆ? ತಿಳಿದುಕೊಳ್ಳೋಣ ಬನ್ನಿ.


ಮಾರುತಿ ಪಾಲಿಗೆ ವ್ಯಾಗನಾರ್ ಚಿನ್ನದ ಮೊಟ್ಟೆ ಇಡುವ ಕಾರು. 1999ರಲ್ಲಿ ರಸ್ತೆಗಿಳಿದಂದಿನಿಂದ ಇಲ್ಲಿವರೆಗೆ ಬರೋಬ್ಬರಿ 13 ಲಕ್ಷ ವ್ಯಾಗನಾರ್ ಮಾರಾಟವಾಗಿವೆ. ಅಂದರೆ ಕಂಪನಿಯು ಪ್ರತಿತಿಂಗಳು ಸರಾಸರಿ 12 ಸಾವಿರ ವ್ಯಾಗನಾರ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ ವ್ಯಾಗನಾರ್ ಹೊಸ ಅವತಾರದಲ್ಲಿ ಆಗಮಿಸಿದ್ದು, ಎತ್ತರದ ಹುಡುಗ ಇನ್ನಷ್ಟು ಸ್ಮಾರ್ಟಾಗಿ ಕಾಣಿಸುತ್ತಿದ್ದಾನೆ. `ನಮ್ಮ ಅತ್ಯಧಿಕ ಮಾರಾಟದ ಕಾರನ್ನು ಇನ್ನಷ್ಟು ಆಕರ್ಷಕಗೊಳಿಸುವ ಉದ್ದೇಶದಿಂದ ಸ್ಟಿಂಗ್ರೇ ಪರಿಚಯಿಸಲಾಗಿದೆ' ಎಂದು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಅಯುಕವಾ ಹೇಳಿದ್ದಾರೆ.

ಹೇಗಿದೆ ಮಾರುತಿ ಸ್ಟಿಂಗ್ರೆ?
ಕೆಲವು ಕಾರು ಕಂಪನಿಗಳು ಕೇವಲ ಒಂದಿಷ್ಟು ಗ್ರಾಫಿಕ್ಸ್ ಬದಲಾವಣೆ ಮಾಡಿ ಕಾರುಗಳನ್ನು ರಿಲಾಂಚ್ ಮಾಡುತ್ತಿವೆ. ಆದರೆ ನೂತನ ವ್ಯಾಗನಾರ್ ಸ್ಟಿಂಗ್ರೆ ಕಾರಿನಲ್ಲಿ ಕೆಲವು ಹೊಸ ಫೀಚರ್‍ಗಳನ್ನು ಮತ್ತು ಹೊಸ ಮಾರ್ಪಾಡುಗಳನ್ನು ಗುರುತಿಸಬಹುದಾಗಿದೆ. ಕಂಪನಿಯು ಅದರ ವಿನ್ಯಾಸದಲ್ಲೇ ಕೊಂಚ ಬದಲಾವಣೆ ಮಾಡಿ ಎತ್ತರದ ಹುಡುಗನನ್ನು ಅಂದಗೊಳಿಸಿದೆ. ವಿಶೇಷವಾಗಿ ವಿನ್ಯಾಸ ಮಾಡಿರುವ ಕ್ರೋಮ್ ಗ್ರಿಲ್ಲನ್ನು ನೀಟಾಗಿ ಮುಂಭಾಗದಲ್ಲಿ ಜೋಡಿಸಲಾಗಿದೆ. ಪೆÇ್ರಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ವಿಶಾಲವಾದ ಏರ್‍ಡ್ಯಾಮ್ ಕಾರು ಆಕರ್ಷಕವಾಗಿ ಕಾಣುತ್ತಿದೆ. ವಿನೂತನ ವಿನ್ಯಾಸದ ಅಲಾಯ್ ವೀಲ್‍ನಿಂದ ಕಾರಿಗೆ ಸ್ಪೋಟ್ರ್ಸ್ ಲುಕ್ ಬಂದಿದೆ. ಕಾರಿನ ಹಿಂಭಾಗದಲ್ಲಿ ವಿಭಿನ್ನ ವಿನ್ಯಾಸಗಳ ಟೇಲ್ ಲ್ಯಾಂಪ್‍ಗಳಿವೆ. ಕ್ರೋಮ್ ಬಾರ್‍ನಲ್ಲಿ ಸ್ಟಿಂಗ್ರೇ ಹೆಸರನ್ನು ಬರೆಯಲಾಗಿದೆ.
ಕಾರಿನ ಇಂಟಿರಿಯರ್‍ನಲ್ಲೂ ಕೆಲವೊಂದು ಮಾರ್ಪಾಡುಗಳನ್ನು ಗುರುತಿಸಬಹುದಾಗಿದೆ. ಟಾಪ್ ಎಂಡ್ ವಿಎಕ್ಸ್ ಆವೃತ್ತಿಯಲ್ಲಿ ಡ್ರೈವರ್ ಏರ್‍ಬ್ಯಾಗ್ ಮತ್ತು ಎಬಿಎಸ್ ಇದೆ. ಹಳೆಯ ವ್ಯಾಗನಾರ್ ಕಾರುಗಳಲ್ಲಿನ ದ್ವಿಬಣ್ಣದ ಇಂಟಿರಿಯರ್‍ಗೆ ಹೋಲಿಸಿದರೆ ನೂತನ ಕಾರಲ್ಲಿ ಕಪ್ಪು ಬಣ್ಣದ ಇಂಟಿರಿಯರ್ ವಿನ್ಯಾಸವಿದೆ. ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೃದು ಚರ್ಮದ ಹಾಸು ಹಾಕಿರುವ ಸ್ಟೀಯರಿಂಗ್ ವೀಲ್ ಇದೆ. ಸ್ಟಿಯರಿಂಗ್‍ನಲ್ಲಿಯೇ ಆಡಿಯೋ ಕಂಟ್ರೋಲ್ ಸಹ ಇದೆ. ಎಲೆಕ್ಟ್ರಿಕ್ ಹೊಂದಾಣಿಕೆ ಫೀಚರ್ ಇರುವ ಒವಿಆರ್‍ಎಂ, ಪವರ್ ವಿಂಡೋಸ್ ಇದೆ. ದೂರ, ಇಂಧನ ದಕ್ಷತೆ ಮಾಹಿತಿ ನೀಡುವ ಮಲ್ಟಿ ಇನ್‍ಫಾರ್ಮೆಷನ್ ಡಿಸ್‍ಪ್ಲೇ ಸಹ ಇದರಲ್ಲಿದೆ.  ಮ್ಯೂಸಿಕ್ ಮಸ್ತಿಗೆ ಅನುಕೂಲವಾಗುವಂತೆ ಇನ್‍ಬಿಲ್ಟ್ ಯುಎಸ್‍ಬಿ ಮತ್ತು ಎಯುಎಕ್ಸ್ ಸಪೆÇೀರ್ಟ್ ಇರುವ ಆಡಿಯೋ ವ್ಯವಸ್ಥೆ ಇದೆ. ಕಾರಿನ ಸ್ಥಳಾವಕಾಶ ವಿಷಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮೆಕಾನಿಕಲ್ ವಿಷಯದಲ್ಲಿ ನೂತನ ಸ್ಟಿಂಗ್ರೇ ಕಾರಿನಲ್ಲಿ ಯಾವುದೇ ಹೊಸ ಬದಲಾವಣೆ ಮಾಡಲಾಗಿಲ್ಲ. ಹಿಂದಿನ ವ್ಯಾಗನಾರ್ ಕಾರಿನಲ್ಲಿದ್ದ 998ಸಿಸಿಯ, 3 ಸಿಲಿಂಡರ್‍ನ ಎಂಜಿನೇ ಮುಂದುವರೆದಿದೆ. ಇದು 6,200 ಆವರ್ತನಕ್ಕೆ 68 ಪಿಎಸ್ ಪವರ್ ಮತ್ತು 3,500 ಆವರ್ತನಕ್ಕೆ 90 ಎನ್‍ಎಂ ಟಾರ್ಕ್‍ಪವರ್ ನೀಡುತ್ತದೆ. ನೂತನ ಕಾರಿನ ಮೈಲೇಜ್ ಹೆಚ್ಚಾಗಿರುವುದಾಗಿ ಮಾರುತಿ ಹೇಳಿದೆ. ಕಂಪನಿಯ ಪ್ರಕಾರ ವ್ಯಾಗನಾರ್ ಸ್ಟಿಂಗ್ರೇ ಪ್ರತಿಲೀಟರ್ ಪೆಟ್ರೋಲಿಗೆ 20.5 ಕಿ.ಮೀ. ಮೈಲೇಜ್ ನೀಡಲಿದೆ. ಟೆಸ್ಟ್ ಡ್ರೈವ್ ನಂತರ ಇದರ ಮೈಲೇಜನ್ನು ಖಚಿತಗೊಳಿಸಬಹುದು.
ವ್ಯಾಗನಾರ್ ಸ್ಟಿಂಗ್ರೇ ವಿಎಕ್ಸ್‍ಐ ಆವೃತ್ತಿಯಲ್ಲಿ ಡ್ರೈವರ್ ಏರ್‍ಬ್ಯಾಗ್ ಮತ್ತು ಎಬಿಎಸ್ ಐಚ್ಛಿಕವಾಗಿದ್ದು, ರಿಯರ್ ವೈಪರ್ ಮತ್ತು ಡಿಫಾಗರ್ ಸ್ಟಾಂಡರ್ಡ್ ಫೀಚರ್ ಆಗಿದೆ. ಸ್ಟಿಂಗ್ರೇ ಬೇಸ್ ಆವೃತ್ತಿ ಎಲ್‍ಎಕ್ಸ್‍ಐಯ ದರ 4.10 ಲಕ್ಷವಿದ್ದರೆ, ಮಧ್ಯಮ ಶ್ರೇಣಿಯ ವಿಎಕ್ಸ್‍ಐ ಆವೃತ್ತಿ ದರ 4.38 ಲಕ್ಷ ಮತ್ತು ವಿಎಕ್ಸ್‍ಐ ಟಾಪ್‍ಎಂಡ್ ಆವೃತ್ತಿ ದರ 4.67 ಲಕ್ಷ ರೂ. ಆಗಿದೆ. ಇವೆಲ್ಲವು ದೆಹಲಿ ಎಕ್ಸ್‍ಶೋರೂಂ ದರ.

ಡಿಸೇಲ್ ವ್ಯಾಗನಾರ್ ಬರುತ್ತಾ?
ವದಂತಿಗಳ ಪ್ರಕಾರ ಈಗಾಗಲೇ ಪೆಟ್ರೋಲ್, ಸಿಎನ್‍ಜಿ, ಎಲ್‍ಪಿಜಿ ಆಯ್ಕೆಯಲ್ಲಿ ಲಭ್ಯವಿರುವ ವ್ಯಾಗನಾರ್‍ನ ಡೀಸೆಲ್ ಆವೃತ್ತಿಯೂ ಆಗಮಿಸಲಿದೆ. ವಾಹನ ಲೋಕದಲ್ಲಿ ಕೆಲವು ವದಂತಿಗಳು ಸುಳ್ಳಾಗುವುದಿಲ್ಲ. ಹೀಗಾಗಿ ವ್ಯಾಗನಾರ್ ಡೀಸೆಲ್ ನಿರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ. ಒಂದು ಮೂಲದ ಪ್ರಕಾರ ಜಪಾನ್‍ನ ಸುಜುಕಿ ಮೋಟರ್ ಸಣ್ಣಕಾರುಗಳಿಗೆ ಸೂಕ್ತವಾಗುವ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆಯಂತೆ. ಈ ಎಂಜಿನನ್ನು ವ್ಯಾಗನಾರ್‍ಗೂ ಬಳಸುವ ಸಾಧ್ಯತೆಯಿದೆ ಎಂದು ವಾಹನ ವಿಮರ್ಶಾ ತಾಣ ಟೀಮ್ ಬಿಎಚ್‍ಪಿಯಲ್ಲಿ ಚರ್ಚೆ ನಡೆಯುತ್ತಿದೆ. ಇನ್ನೊಂದು ವಾಹನ ವಿಮರ್ಶಾ ತಾಣದ ಪ್ರಕಾರ, ಮಾರುತಿ ಈಗಾಗಲೇ ಡೀಸೆಲ್ ವ್ಯಾಗನಾರ್ ಅಭಿವೃದ್ಧಿಪಡಿಸುತ್ತಿದ್ದು, ಈ ವರ್ಷಾಂತ್ಯದೊಳಗೆ ಆಗಮಿಸಲಿದೆ ಎನ್ನುತ್ತಿದೆ. ಈ ಕುರಿತು ಮಾರುತಿ ಸುಜುಕಿಯ ಟಾಪ್ ಲೆವೆಲ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಇದಮಿತ್ತಂ ಉತ್ತರ ದೊರಕಿಲ್ಲ.

ಎತ್ತರದ ಹುಡುಗನಿಗೆ ಬೇಡಿಕೆ
ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು 33,587 ಮಾರುತಿ 800, ಆಲ್ಟೊ, ಎಸ್ಟಾರ್ ಮತ್ತು ವ್ಯಾಗನಾರ್ ಕಾರುಗಳನ್ನು ಮಾರಾಟ ಮಾಡಿದೆ. ಕೆಲವು ಡೀಲರ್‍ಗಳು ನೀಡಿರುವ ಮಾಹಿತಿ ಪ್ರಕಾರ ಮಾರುತಿಯ ಆಲ್ಟೊ ಕಾರಿಗೆ ಅತ್ಯಧಿಕ ಬೇಡಿಕೆಯಿದ್ದು, ನಂತರದ ಸ್ಥಾನವನ್ನು ವ್ಯಾಗನಾರ್ ಪಡೆದುಕೊಂಡಿದೆ. ಹಿಂಭಾಗದಲ್ಲಿ ಬಾಗಿರುವ ರಿಟ್ಜ್ ಕಾರು ಸಹ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆಯಂತೆ. ವ್ಯಾಗನಾರ್ ಕಾರು ಪೆಟ್ರೋಲ್, ಸಿಎನ್‍ಜಿ, ಎಲ್‍ಪಿಜಿ ಇಂಧನ ಆಯ್ಕೆಯಲ್ಲಿ ಲಭ್ಯ. ಪೆಟ್ರೋಲ್ ಆವೃತ್ತಿಯು ಎಲ್‍ಎಕ್ಸ್, ಎಲ್‍ಎಕ್ಸ್‍ಐ, ವಿಎಕ್ಸ್‍ಐ, ವಿಎಕ್ಸ್‍ಐ ಎಬಿಎಸ್ ಆಯ್ಕೆಯಲ್ಲಿ ದೊರಕುತ್ತದೆ. ಬೆಂಗಳೂರಿನ ಕಲ್ಯಾಣಿ ಮೋಟರ್ಸ್ ನೀಡಿರುವ ಮಾಹಿತಿ ಪ್ರಕಾರ ವ್ಯಾಗನಾರ್ ಎಲ್‍ಎಕ್ಸ್‍ಐ , ಎಲ್‍ಎಕ್ಸ್, ವಿಎಕ್ಸ್‍ಐ ಆನ್‍ರೋಡ್ ದರ ಕ್ರಮವಾಗಿ 4,91,202 ರೂ., 4,60,752 ರೂ ಮತ್ತು 5,21,013 ರೂ. ಇದೆ.

- Praveen Chandra Puttur

No comments