ಕ್ವೀನ್ ಒಕ್ಟೊವಿಯಾ

Share:






ಜೆಕ್ ಗಣರಾಜ್ಯದ ಸ್ಕೋಡಾ ಕಾರು ಕಂಪನಿಯು ಮೂರನೇ ತಲೆಮಾರಿನ ನೂತನ ಒಕ್ಟೊವಿಯಾ ಕಾರನ್ನು ಅನಾವರಣ ಮಾಡಿದೆ. ದೇಶದಲ್ಲಿ ದೀಪಾವಳಿ ವೇಳೆಗೆ ಮಾರಾಟ ಆರಂಭವಾಗಲಿರುವ ಒಕ್ಟೊವಿಯಾ ಕಾರು ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆಯೇ?


ಒಕ್ಟೊವಿಯಾ ಎಂದರೆ ರೋಮ್ ಸಾಮ್ರಾಜ್ಯದ ಸ್ಥಾಪಕ ಆಗಸ್ಟಸ್ ಸಹೋದರಿ ನೆನಪಿಗೆ ಬರಬಹುದು. ಈಕೆ ಜೂಲಿಯಸ್ ಸೀಸರ್‍ನ ನಿಕಟವರ್ತಿಯಾಗಿದ್ದ ಮಾರ್ಕ್ ಆಂಟೊನಿಯ ಪತ್ನಿ. ಒಕ್ಟೊವಿಯಾ ಹೆಸರುಳ್ಳವರು ಅಧಿಕಾರ, ಶಕ್ತಿ, ನಾಯಕತ್ವದ ಇಚ್ಛೆಯುಳ್ಳವರಾಗಿದ್ದು, ಸದಾ ಮುನ್ನಡೆ ಸಾಧಿಸಬೇಕೆಂದು ಬಯಸುತ್ತಾರಂತೆ. ನಾವೀಗ ವಿಮರ್ಶೆ ಮಾಡುತ್ತಿರುವ ರಾಣಿ ಹೆಸರು ಕೂಡ ಒಕ್ಟೊವಿಯಾ. ಆದರೆ ಈಕೆ ಜೆಕ್ ಗಣರಾಜ್ಯದವಳು. ಈಗಾಗಲೇ ಎರಡು ತಲೆಮಾರಿನ ಆವೃತ್ತಿಗಳಿಂದ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿರುವ ಒಕ್ಟೊವಿಯಾ ಕಾರಿನ ಮೂರನೇ ಆವೃತ್ತಿ ಭಾರತಕ್ಕೆ ಆಗಮಿಸಿದೆ.
ಹಾಗಂತ, ದೇಶದ ರಸ್ತೆಗೆ ಒಕ್ಟೊವಿಯಾ ಹೊಸ ಪರಿಚಯವೇನಲ್ಲ. 2011ರ ನವೆಂಬರ್‍ನಲ್ಲಿಯೇ ಎರಡನೇ ತಲೆಮಾರಿನ ಒಕ್ಟೊವಿಯಾ ಆಗಮಿಸಿತ್ತು. 2001ರ ನವೆಂಬರ್‍ನಿಂದ ಅಕ್ಟೊಬರ್ 2010ರವರೆಗೆ ದೇಶದಲ್ಲಿ 45 ಸಾವಿರ ಒಕ್ಟೊವಿಯಾ ಕಾರುಗಳು ಮಾರಾಟಗೊಂಡಿವೆ. ಆದರೆ ಇದಕ್ಕಿಂತ ದೊಡ್ಡ ಗಾತ್ರವನ್ನು ನೂತನ ಮೂರನೇ ತಲೆಮಾರಿನ ಒಕ್ಟೊವಿಯಾ ಹೊಂದಿರಲಿದೆ. ಅಂದರೆ ಸುಮಾರು 90 ಮಿ.ಮೀ. ಹೆಚ್ಚು ಉದ್ದ ಹೊಂದಿರಲಿದೆ.

ಹೊಸ ತಲೆಮಾರಿನ ಕಾರು
ಸ್ಕೋಡಾ ಈಗ ಅನಾವರಣ ಮಾಡಿರುವುದು ಮೂರನೇ ತಲೆಮಾರಿನ ಒಕ್ಟೊವಿಯಾವನ್ನು. ಸ್ವಲ್ಪ ದಿನ ಕಳೆದ ನಂತರ ದರ ಅನೌನ್ಸ್ ಮಾಡುವುದಾಗಿ ಹೇಳಿದೆ. ದೀಪಾವಳಿ ವೇಳೆಗೆ ಮಾರಾಟ ಆರಂಭಿಸುವುದನ್ನು ಖಚಿತಪಡಿಸಿದೆ. ವಿಶೇಷವೆಂದರೆ ಈಗಾಗಲೇ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿರುವ ಘಟಕದಲ್ಲಿ ಒಕ್ಟೊವಿಯಾ ಉತ್ಪಾದನೆ ಆರಂಭಗೊಂಡಿದೆ.
ಫೆÇೀಕ್ಸ್‍ವ್ಯಾಗನ್ ಜೆಟ್ಟಾ ಮತ್ತು ಗೊಲ್ಫ್ ಕಾರಿನ ಪ್ಲಾಟ್‍ಫಾರ್ಮ್‍ನಲ್ಲಿ ನೂತನ ಒಕ್ಟೊವಿಯಾವನ್ನು ವಿನ್ಯಾಸ ಮಾಡಲಾಗಿದೆ. ವಿನ್ಯಾಸವು ಹಳೆಯ ಆವೃತ್ತಿಗಳಿಗಿಂತ ಅಮೋಘವಾಗಿದ್ದು, ಕಣ್ಮನ ಸೆಳೆಯುವಂತೆ ಇರಲಿದೆ. ಆರಾಮದಾಯಕ, ಹಗುರ ಮತ್ತು ವಿಶ್ವದಲ್ಲೇ ಸುರಕ್ಷಿತ ಕಾರಾಗಿದ್ದು, ಕಾರು ಮಾರುಕಟ್ಟೆಯಲ್ಲಿ `ಗೇಮ್ ಚೇಂಜರ್' ಆಗಲಿದೆ ಎಂದು ಸ್ಕೋಡಾ ಭರವಸೆ ವ್ಯಕ್ತಪಡಿಸಿದೆ.
`ಹಬ್ಬದ ವೇಳೆಗೆ ನೂತನ ಒಕ್ಟೊವಿಯಾ ಮಾರಾಟ ಆರಂಭವಾಗಲಿದೆ. ಸೂಪರ್ಬ್, ಯೆಟಿ, ಲಾರಾ, ರ್ಯಾಪಿಡ್ ಬಳಗಕ್ಕೆ ಹೊಸ ಸೇರ್ಪಡೆಯಾಗಿರುವ ಒಕ್ಟೊವಿಯಾ ಕಾರು ಗೇಮ್ ಚೇಂಜರ್  ಆಗಲಿದೆ' ಎಂದು ಸ್ಕೋಡಾ ಆಟೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ರಾವ್ ಹೇಳಿದ್ದಾರೆ.
ವಿನ್ಯಾಸ: ಮೊದಲ ನೋಟಕ್ಕೆ ಇದು ವಿಶಾಲ ಸ್ಥಳಾವಕಾಶ ಹೊಂದಿರುವ ಕಾರೆಂದು ವೇದ್ಯವಾಗುತ್ತದೆ. ಇದರ ವೀಲ್‍ಬೇಸ್ 108ಎಂಎಂ ಇದ್ದು. ಲಾರಾ ಕಾರಿಗಿಂತ ಹೆಚ್ಚಿನ ಗಾತ್ರ ಹೊಂದಿದೆ. ಇದರ ಕ್ಯಾಬಿನ್ ಸಹ ವಿಶಾಲವಾಗಿದೆ. ಸುಮಾರು 590 ಲೀಟರ್‍ನ ಬೃಹತ್ ಲಗೇಜ್ ಸ್ಥಳಾವಕಾಶ ಇರಲಿದೆ. ಹೊಸದಾಗಿ ಚಿಟ್ಟೆಯಂತಹ ಗ್ರಿಲ್, ದ್ವಿಬಣ್ಣದ ಪ್ಲೈಯಿಂಗ್ ಏರೋ ಇತ್ಯಾದಿಗಳು ಕಾರಿನ ಅಂದ ಹೆಚ್ಚಿಸಿವೆ. ಅಂದದ ಹೆಡ್‍ಲ್ಯಾಂಪ್‍ನಿಂದಾಗಿ ಔಡಿ ಕಾರಿನಂತೆ ಭಾಸವಾಗುತ್ತದೆ. ಒಂದು ಕಡೆಯಿಂದ ನೋಡಿದರೆ ಬಿಎಂಡಬ್ಲ್ಯು ಕಾರಿಗೆ ಸ್ಪರ್ಧೆ ನೀಡುವಂತೆ ಗೋಚರಿಸುತ್ತದೆ.
ಎಂಜಿನ್: ಒಕ್ಟೊವಿಯಾ ಕಾರಿಗೆ ಯಾವೆಲ್ಲ ಎಂಜಿನ್ ಅಳವಡಿಸಲಾಗುವುದು ಎಂದು ಸ್ಕೋಡಾ ಖಚಿತವಾಗಿ ಹೇಳಿಲ್ಲ. ಆದರೆ ಮೂರು ಎಂಜಿನ್ ಆಯ್ಕೆಗಳನ್ನು ಪರಿಚಯಿಸುವುದಾಗಿ ಸ್ಪಷ್ಟಪಡಿಸಿದೆ. ಒಂದು ಮೂಲದ ಪ್ರಕಾರ ಇದು ಹೆಚ್ಚು ಶಕ್ತಿಶಾಲಿ ಮತ್ತು ಪರಿಷ್ಕøತ ಎಂಜಿನ್‍ನೊಂದಿಗೆ ಆಗಮಿಸಲಿದೆ. ಅಂದರೆ  2.0 ಲೀಟರ್‍ನ ಡೀಸೆಲ್ ಮತ್ತು 1.8 ಲೀಟರ್ ಟಿಎಸ್‍ಐ ಪೆಟ್ರೋಲ್ ಎಂಜಿನ್‍ನಲ್ಲಿ ಲಭ್ಯವಿರಲಿದೆ. 1.4 ಲೀಟರ್‍ನ ಟಿಎಸ್‍ಐ ಎಂಜಿನ್‍ನಲ್ಲೂ ದೊರಕುವ ಸೂಚನೆಗಳಿವೆ.
ನೂತನ ಕಾರು 4 ಸಿಲಿಂಡರ್‍ನ 1798 ಸಿಸಿಯ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದು 177 ಹಾರ್ಸ್‍ಪವರ್ ನೀಡಲಿದೆ. 7 ಸ್ಪೀಡ್‍ನ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಗಿಯರ್‍ಬಾಕ್ಸ್ ಹೊಂದಿರಲಿದೆ. 4 ಸಿಲಿಂಡರ್‍ನ 1968ಸಿಸಿಯ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಒಕ್ಟೊವಿಯಾ ಲಭ್ಯವಿರಲಿದೆ. ಇದು 148 ಹಾರ್ಸ್‍ಪವರ್ ನೀಡಲಿದೆ. ಇದು 6 ಸ್ಪೀಡ್‍ನ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಗಿಯರ್‍ಬಾಕ್ಸ್ ಹೊಂದಿರಲಿದೆ.

ವಿಶ್ಲೇಷಕರು ಏನಂತಾರೆ?
ಕಾರ್ ವಾಲೆ ವಾಹನ ವಿಮರ್ಶಕರ ಪ್ರಕಾರ, ನೂತನ ಒಕ್ಟೊವಿಯಾ ದರ ಲಾರಾಕ್ಕಿಂತ ಹೆಚ್ಚಿರಲಿದೆ. ಇವರ ಪ್ರಕಾರ ಒಕ್ಟೊವಿಯಾ ಆರಂಭಿಕ ದರ 14.5 ಲಕ್ಷ ಇರಲಿದೆ. ಪೂರ್ತಿ ಪ್ರಮಾಣದಲ್ಲಿ ಫೀಚರ್‍ಗಳಿಂದ ಲೋಡ್ ಆಗಿರುವ ಡೀಸೆಲ್ ಆವೃತ್ತಿಯ ದರ 20 ಲಕ್ಷದವರೆಗಿರಲಿದೆ.
ಕಾರ್ ಟಾಕ್ ವಿಶ್ಲೇಷಕರ ಪ್ರಕಾರ, ಈ ಹಿಂದೆ ಒಕ್ಟೊವಿಯಾ ಮತ್ತು ಲಾರಾ ಜೊತೆಜೊತೆಯಾಗಿ ಸಾಗಿತ್ತು. ಆದರೆ ಭವಿಷ್ಯದಲ್ಲಿ ಲಾರಾವನ್ನು ಹಿಂದಿಕ್ಕಿ ಒಕ್ಟೊವಿಯಾ ಹೊಸ ಇತಿಹಾಸ ಬರೆಯಬಹುದು ಎಂದಿದ್ದಾರೆ.
ಟಾಪ್‍ಗಿಯರ್ ವಿಶ್ಲೇಷಕರ ಪ್ರಕಾರ ನೂತನ ಒಕ್ಟೊವಿಯಾದ ಕ್ಯಾಬಿನ್ ಫೆÇೀಕ್ಸ್‍ವ್ಯಾಗನ್ ಜೆಟ್ಟಾ ಕಾರಿನಂತೆ ಇದೆ. ಹಿಂಬದಿ ಪ್ರಯಾಣಿಕರಿಗೆ ಸಾಕಾಗುವಷ್ಟು ಲೆಗ್ ಮತ್ತು ಸೋಲ್ಡರ್ ಸ್ಥಳಾವಕಾಶ ಇರಲಿದೆ. ಬ್ಲೂಟೂಥ್ ಕನೆಕ್ಟಿವಿಟಿ, ಡ್ಯೂಯಲ್ ಕ್ಲೈಮೆಟ್ ಕಂಟ್ರೋಲ್, ಟಚ್‍ಸ್ಕ್ರೀನ್ ಮಲ್ಟಿಮೀಡಿಯಾ ಡಿಸ್‍ಪ್ಲೇ, ಪಾರ್ಕಿಂಗ್ ಸೆನ್ಸಾರ್ ಇರಲಿದೆ. ಆದರೆ ರಿವರ್ಸ್ ಕ್ಯಾಮರಾ ಇತ್ಯಾದಿ ಫೀಚರ್‍ಗಳು ಮಿಸ್ಸಾಗಿರುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಒಕ್ಟೊವಿಯಾ ಹಿಸ್ಟರಿ: ಇದು ಯುರೋಪ್‍ನ ಸಿ ಸೆಗ್ಮೆಂಟ್‍ನ ಸಣ್ಣ ಫ್ಯಾಮಿಲಿ ಕಾರು. ಇದರ ಉತ್ಪಾದನೆ 1996ರಲ್ಲಿ ಆರಂಭವಾಯಿತು. ಕಂಪನಿಯು 1959ರಿಂದ 1971ರವರೆಗೆ ರಸ್ತೆಯಲ್ಲಿದ್ದ ಹಳೆಯ ಒಕ್ಟೊವಿಯಾ ಕಾರಿನ ಹೆಸರನ್ನೇ ಇದಕ್ಕೆ ಮರುನಾಮಕರಣ ಮಾಡಿತ್ತು. ಒಟ್ಟು ಮೂರು ತಲೆಮಾರಿನ ಒಕ್ಟೊವಿಯಾ ಕಾರನ್ನು ಕಂಪನಿ ಪರಿಚಯಿಸಿದೆ. 1996ರಿಂದ 2004ವರೆಗೆ ಮೊದಲ ತಲೆಮಾರು, 2004ರಿಂದ 2013ರವರೆಗೆ ಎರಡನೇ ತಲೆಮಾರು ಮತ್ತು 2013ರಿಂದ ಮೂರನೇ ಜನರೇಷನ್ ಒಕ್ಟೊವಿಯಾವನ್ನು ಕಂಪನಿ ಪರಿಚಯಿದೆ.
ಹೊಸ ಒಕ್ಟೊವಿಯಾ ಆಗಮನದ ಹಿನ್ನೆಲೆಯಲ್ಲಿ ಕಂಪನಿಯು ಹಳೆ ಒಕ್ಟೊವಿಯಾ ಮಾರಾಟ ಸ್ಥಗಿತಗೊಳಿಸುವ ಸೂಚನೆಯು ದೊರಕಿದೆ. ಒಟ್ಟಾರೆ ಮೂರನೇ ತಲೆಮಾರಿನ ಕಾರಿನ ಮೇಲೆ ಕಂಪನಿಯು ಅಪಾರ ಭರವಸೆ ಇಟ್ಟಿದ್ದು. ನಿಜವಾದ ಗೇಮ್ ಚೇಂಜರ್ ಆಗುವುದೋ ಕಾದು ನೋಡಬೇಕಿದೆ.

- Praveen Chandra Puttur

No comments