ಒಲವಿನ ಮಯೂರಿಗೆ ಮೊದಲ ಪತ್ರ

Share:
ಹಾಯ್ ಮಯೂರಿ, ಕಳೆದ ಒಂದು ವಾರದಿಂದ ನಾನೆಲ್ಲಿ ಹೋದೆ ಎಂದು ಹುಡುಕುತಿರುವೆಯಾ? ಕ್ಷಮಿಸು, ಹೇಳದೆ ಕೇಳದೆ ರೈಲು ಹತ್ತಿಬಿಟ್ಟೆ. ಬಹುಶಃ ಇದು ನಿನಗೆ ನಾನು ಬರೆಯುತ್ತಿರುವ ಮೊದಲ ಪತ್ರ.
ನಾವಿಬ್ಬರೂ ಹತ್ರ ಹತ್ರವೇ ಇದ್ದಕಾರಣ ಇಂತಹ ಪತ್ರಗಳ ಅವಶ್ಯಕತೆ ಬಿದ್ದಿರಲಿಕ್ಕಿಲ್ಲ. ಪ್ರಯಾಣದ ಉದ್ದಕ್ಕೂ ನಿನ್ನ ಬಗ್ಗೆಯೇ ಯೋಚಿಸಿದೆ. ಎಷ್ಟು ಯೋಚಿಸಿದರೂ ನಿನ್ನನ್ನು ಇಷ್ಟಪಡಲು ಆರಂಭಿಸಿದ ದಿನಾಂಕ ಇನ್ನೂ ನೆನಪಾಗುತ್ತಿಲ್ಲ.
ಏಳನೇ ಕ್ಲಾಸಿನಲ್ಲಿ "ನಮ್ಮಮ್ಮ ಶಾರದೆ..." ಹಾಡಿಗೆ ಕಣ್ಣರಳಿಸಿ ನೃತ್ಯ ಮಾಡುತ್ತಿದ್ದಾಗಲೇ ನೀನು ಇಷ್ಟವಾಗಿದ್ದಿ. ಹೈಸ್ಕೂಲ್ ನಲ್ಲಿ ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕಾ... ಅಂತ ನೀನು ಸ್ಟೇಜ್ ಪೂರ್ತಿ ಚಿಟ್ಟೆ ತರಹ ಕುಣಿದ ದೃಶ್ಯ ಈಗಲೂ ನನ್ನ ಕಣ್ಣಿನ ಮುಂದಿದೆ. ಮೊದಲ ಬಾರಿಗೆ ಡ್ಯಾನ್ಸ್ ಕ್ಲಾಸಿಗೆ ಹೋಗಿ ಬಂದು ನನ್ನ ಕೈ ಹಿಡಿದು "ಕಾಲೇಲ್ಲ ವಿಪರೀತ ನೋವು ಪವಿ' ಅಂದು ಅತ್ತವಳು ನೀನು. ಮತ್ತೆ ದಿನಕಳೆದಂತೆ ಕ್ಲಾಸಿಗೆ ಮುನ್ನ ಮತ್ತು ನಂತರ ಗಂಟೆಗಟ್ಟಲೆ "ಥಕಥೈ' ಎಂದು ನೃತ್ಯ ಮಾಡಿ ನನ್ನನ್ನು ಕಾಯಿಸಿ ನೀನು ನೋಯಿಸುತ್ತಿದ್ದೆ.
ಕಾಯುವುದು ಕಷ್ಟವೆಂದು ಆಗ ಅನಿಸಿದರೂ ಇಷ್ಟಪಟ್ಟು ಕಾಯುತ್ತಿದ್ದೆ. ಆದರೆ ಕಾಲೇಜು ಸೇರಿದ ನಂತರ ಕಾಯುವುದು ವ್ಯರ್ಥವೆಂದು ಅನಿಸುವಷ್ಟು ನೀನು ವರ್ತಿಸುತ್ತಿದ್ದೆ. ನಿನ್ನ ನಾಟ್ಯಕ್ಕೆ ಬೆರಗಾಗಿ ಚಪ್ಪಾಳೆ ತಟ್ಟುವ ಸಾವಿರಾರು ಜನರ ನಡುವೆ ನನ್ನ ಚಪ್ಪಾಳೆ ನಿನ್ನ ಕಿವಿಗೆ ಬೀಳುತ್ತಿರಲಿಲ್ಲ. ನಿನಗೆ ನಾನು ಬೇಡವೆಂದು ಅನಿಸಿದಾಗ ಒತ್ತಾಯ ಮಾಡಲು ನನಗೆಲ್ಲಿಂದ ಸಾಧ್ಯವಿತ್ತು. ದೇಶದ ಗಡಿದಾಟಿ ಹೋದ ನನಗೆ ದುಡ್ಡು ಮಾಡುವ ಕೆಲಸ 2 ವರ್ಷದಲ್ಲಿಯೇ ಬೋರ್ ಹೊಡೆಸಿತು. ಊರಿಗೆ ಬಂದು ನೋಡಿದಾಗ ಅಲ್ಲಿ ನೀನಿರಲಿಲ್ಲ. ಮನೆಯವರ ಒತ್ತಡದಿಂದ ಮದುವೆಯಾದೆ. ಪುಣ್ಯಕ್ಕೆ ಆಕೆ ಸಹ ನಿನ್ನಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ನೃತ್ಯ ಇಷ್ಟ ಪಟ್ಟವಳು. ಅವಳೂ ನಾನೂ ಸೇರಿ ಊರಿನಲ್ಲೇ ಪುಟ್ಟದಾದ ನೃತ್ಯ ಶಾಲೆ ತೆರೆದಿದ್ದೇವೆ. ಅಲ್ಲಿ ನೂರೈವತ್ತು ಮಕ್ಕಳು ನೃತ್ಯ ಮಾಡುತ್ತಿದ್ದಾರೆ.
ಮಯೂರಿ ಕೆಲವು ಸಮಯದ ಹಿಂದೆ ಒಂದು ಘಟನೆ ನಡೆಯಿತು. ನನ್ನ ಹೆಂಡ್ತಿ ನನ್ನಲ್ಲಿ, ನೀವು ಯಾರನ್ನಾದರೂ ಪ್ರೀತಿಸಿದ್ದೀರಾ ಎಂದಿದ್ದಳು. ನಾನು ಸತ್ಯಸಂಧನಂತೆ "ನಿನ್ನ ಹೆಸರು ಹೇಳಿಬಿಟ್ಟೆ" ಅವಳಿಗೆ ಅದು ಅನಿರೀಕ್ಷಿತ. ಅವಳು ಮತ್ತು ನೀನು ಗೆಳತಿಯರಂತೆ. ಅವಳು ಹೇಳಿದ ನಿನ್ನ ಕಥೆ ಕೇಳಿ ಕಣ್ಣಿರು ಸುರಿಸಿದವನು ನಾನು. ಹೆದರಬೇಡ. ಜೈಪುರದಿಂದ ನಿನಗೆ ಕೃತಕ ಕಾಲುಗಳನ್ನು ತಂದು ಕಟ್ಟುವ ಕುರಿತು ನಾನು ನನ್ನ ಪತ್ನಿ ಮಾತನಾಡುತ್ತಿದ್ದೇವೆ. ನೀನು ಮತ್ತೆ ಅಂದಿನಂತೆ ನಲಿಯಬೇಕು. ಮಯೂರಿಯಾಗಿ.

ಇದನ್ನು ಓದಿದ್ದೀರಾ?

ನಿನ್ನ ಕೋಪಕ್ಕೀಗ ಮೊದಲ ಅನಿವರ್ಸರಿ..!

ಅಜ್ಜ ಹೇಳಿದ ಲವ್ ಸ್ಟೋರಿ

ಅವನು ನಂಗೆ ಇಷ್ಟವಿಲ್ಲ ಕಣೇ…!!!

ಲಾವಣ್ಯ ಎಂಬ ಬಾಲ್ಯದ ಗೆಳತಿ

 

 

 

No comments