ಡೀಸಲ್ ದುನಿಯಾ

Share:
ಡೀಸಲ್ ಕಾರು ದುನಿಯಾದಲ್ಲೀಗ ಎಲ್ಲವೂ ಸರಿಯಾಗಿಲ್ಲ. ಹಸಿರು ತೆರಿಗೆ, ಹೆಚ್ಚುವರಿ ತೆರಿಗೆ ಅಂತ ಡೀಸಲ್ ಕಾರು ಗ್ರಾಹಕರನ್ನು ಹಲವು ಸುಂಕಗಳ ಸಂಕಟಕ್ಕೆ ಸಿಲುಕಿಸಲು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಯುತ್ತಿದೆ.
ದೇಶದಲ್ಲೀಗ ಡೀಸಲ್ ಕಾರುಗಳಿಗೆ ಪರ್ವಕಾಲ. ಗ್ರಾಹಕರ ಮನದಲ್ಲಿ ಪೆಟ್ರೋಲಾ? ಡೀಸಲಾ? ಅನ್ನೋ ಗೊಂದಲ ಸಾಮಾನ್ಯ. ಕೆಲವು ವರ್ಷದ ಹಿಂದೆಯಾಗಿದ್ರೆ ಮಾರಾಟವಾಗುವ ಹತ್ತು ಕಾರುಗಳಲ್ಲಿ ಒಂದು ಡೀಸಲ್ ಕಾರು ಇರುತ್ತಿತ್ತು. ಈಗ ಪೆಟ್ರೋಲ್ ಕಾರುಗಳಿಗೆ ಪೈಪೆÇೀಟಿ ನೀಡುವಂತೆ ಡೀಸಲ್ ಕಾರುಗಳು ಮಾರಾಟವಾಗುತ್ತಿವೆ. ಕಾರು ಕಂಪನಿಗಳು ಸಹ ಡೀಸಲ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹೆಚ್ಚು ಆದ್ಯತೆ ನೀಡುತ್ತಿವೆ.

ಯಾಕೆ ಡೀಸಲ್?

ದುಬಾರಿ ಪೆಟ್ರೋಲ್ ದರದ ಕಾರಣಕ್ಕಾಗಿ ಹೆಚ್ಚಿನ ಜನರು ಡೀಸಲ್ ಕಾರು ಖರೀದಿಸುತ್ತಿದ್ದಾರೆ. ಪೆಟ್ರೋಲ್ ಕಾರಿಗೆ ಹೋಲಿಸಿದರೆ ಇದು ಹೆಚ್ಚು ಮೈಲೇಜ್ ನೀಡುತ್ತದೆ. ಪೆಟ್ರೋಲ್ ಕಾರಿನ ಸರಾಸರಿ ಮೈಲೇಜ್ ಪ್ರತಿಲೀಟರ್ ಇದ್ದರೆ, ಡೀಸಲ್ ಕಾರು ಸರಾಸರಿ 21 ಕಿ.ಮೀ. ಮೈಲೇಜ್ ಇದೆ. ಪೆಟ್ರೋಲ್ ಎಂಜಿನ್‍ಗೆ ಹೋಲಿಸಿದರೆ ಡೀಸಲ್ ಎಂಜಿನ್ ಇಂಧನ ದಕ್ಷತೆ ಶೇಕಡ 25ರಷ್ಟು ಹೆಚ್ಚಿರುತ್ತದೆ.  ಇದರ ರನ್ನಿಂಗ್ ವೆಚ್ಚವೂ ಕಡಿಮೆ. ಸದ್ಯ ಪೆಟ್ರೋಲ್ ಕಾರುಗಳಿಗಿಂತ ಡೀಸಲ್ ಕಾರು ದರ ಸುಮಾರು 1 ಲಕ್ಷದಷ್ಟು ದುಬಾರಿಯಿದೆ. ಡೀಸಲ್ ಕಾರಿಗೆ ವಾಹನ ಸಾಲದ ಮೊತ್ತ, ವಿಮೆ, ನಿರ್ವಹಣೆ ವೆಚ್ಚ ಸಹ ದುಬಾರಿ.

ಆದರೆ ಡೀಸಲ್ ಕಾರಿನ ಮೆಕಾನಿಸಂ ಮತ್ತು ಪೆಟ್ರೋಲ್ ಎಂಜಿನ್ ಮೆಕಾನಿಸಂ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ದಿನನಿತ್ಯ ಕಡಿಮೆ ದೂರ ಪ್ರಯಾಣಿಸುವರಿಗೆ ಡೀಸಲ್ ಕಾರು ಸೂಕ್ತವಲ್ಲ. ಪ್ರತಿನಿತ್ಯ 70 ಕಿ.ಮೀ.ಗಿಂತಲೂ ಹೆಚ್ಚು ಅಥವಾ ವಾರಕ್ಕೆ ಐನೂರು ಕಿ.ಮೀ.ಗಿಂತಲೂ ಹೆಚ್ಚು ಪ್ರಯಾಣಿಸುವಿರಾದರೆ ಡೀಸಲ್ ಕಾರು ಖರೀದಿಸಬಹುದು.  ದೊಡ್ಡ ಗಾತ್ರದ ವಾಹನ ಖರೀದಿಸಲು ಬಯಸುವರು ಸಹ ಡೀಸಲ್ ಕಾರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚುವರಿ ತೆರಿಗೆ
ದೇಶದ ಒಟ್ಟಾರೆ ಡೀಸಲ್ ಬಳಕೆಯಲ್ಲಿ ಶೇಕಡ 16ರಷ್ಟನ್ನು ಕಾರು ಮತ್ತು ಎಸ್‍ಯುವಿಗಳು ಬಳಕೆ ಮಾಡುತ್ತವೆ ಎಂದು ಈ ವರ್ಷ ಆಗಸ್ಟ್‍ನಲ್ಲಿ ಸಂಸತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸರಕಾರ ಮಾಹಿತಿ ನೀಡಿದೆ. ಹೆಚ್ಚುತ್ತಿರುವ ಡೀಸಲ್ ಕಾರುಗಳಿಗೆ ಲಗಾಮು ಹಾಕಲು ಮತ್ತು ಡೀಸಲ್ ಸಬ್ಸಿಡಿ ಲಾಭದಿಂದ ಕಾರುಗಳನ್ನು ದೂರವಿರಿಸಲು ಸರಕಾರ ಪ್ರಯತ್ನಿಸುತ್ತಿದೆ.

ಕಿರಿಟ್ ಪಾರಿಖ್ ಆಯೋಗವು ಡೀಸಲ್ ಕಾರಿಗೆ ಲಗಾಮು ಹಲವು ಮಾರ್ಗೋಪಯಗಳನ್ನು ನೀಡಿತ್ತು. ಡೀಸಲ್ ಮತ್ತು ಪೆಟ್ರೋಲ್ ದರ ಅನಿಯಂತ್ರಣ, ಡೀಸಲ್ ಕಾರುಗಳಿಗೆ ಹೆಚ್ಚು ಅಬಕಾರಿ ಸುಂಕ ವಿಧಿಸುವಂತೆ ಇಂಧನ ಸಚಿವರಾಗಿದ್ದ ಮುರಳಿ ದೇವೂರರಿಗೆ ವರದಿ ನೀಡಿತ್ತು. ಪೆಟ್ರೋಲ್ ಕಾರುಗಳಿಗಿಂತ ಡೀಸಲ್ ಕಾರು ದರವನ್ನು 1.80 ಲಕ್ಷ ದುಬಾರಿ ಮಾಡುವಂತೆ ಸಲಹೆ ನೀಡಲಾಗಿತ್ತು. ಜೊತೆಗೆ ಡೀಸಲ್ ಕಾರುಗಳಿಗೆ ವಾರ್ಷಿಕ ತೆರಿಗೆ  ಮತ್ತು ಸುಂಕ ವಿಧಿಸಬೇಕು. ವರ್ಷಕ್ಕೆ ಸುಮಾರು 50 ಸಾವಿರದಷ್ಟು ರಸ್ತೆ ತೆರಿಗೆ ವಿಧಿಸಬೇಕು ಎಂದು ಹೇಳಿತ್ತು.

ಈ ವರ್ಷ ಮೇ ತಿಂಗಳಲ್ಲಿ ಇಂಧನ ಸಚಿವ ಜೈಪಾಲ್ ರೆಡ್ಡಿ ಸಹ ಡೀಸಲ್ ಕಾರುಗಳಿಗೆ ಹೆಚ್ಚು ತೆರಿಗೆ ವಿಧಿಸುವಂತೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು. ಸಣ್ಣ ಡೀಸಲ್ ಕಾರಿನ ದರವನ್ನು 1.80 ಲಕ್ಷ ರುಪಾಯಿಗಿಂತ ಹೆಚ್ಚು , ಮಧ್ಯಮ ಮತ್ತು ದೊಡ್ಡ ಡೀಸಲ್ ವಾಹನಗಳಿಗೆ 2.6 ಲಕ್ಷದಷ್ಟು ದುಬಾರಿ ಮಾಡಬೇಕೆಂದು ಸರಕಾರಕ್ಕೆ ಜೈಪಾಲ್ ರೆಡ್ಡಿ ಪ್ರಸ್ತಾಪ ಸಲ್ಲಿಸಿದ್ದರು. ಆದರೆ ದೇಶದ ಆರ್ಥಿಕ ವ್ಯವಸ್ಥೆ ಪ್ರಗತಿಯಲ್ಲಿ ವಾಹನೋದ್ಯಮದ ಕೊಡುಗೆ ಅಪಾರವಾಗಿರುವುದರಿಂದ ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾಪ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ.

ಆದರೆ ಕಾರು ಕಂಪನಿಗಳು ಮಾತ್ರ ಡೀಸಲ್ ಕಾರಿಗೆ ಹೆಚ್ಚುವರಿ ಸುಂಕ ವಿಧಿಸುವುದನ್ನು ವಿರೋಧಿಸಿವೆ. `ಕಾರು ಕಂಪನಿಗಳು ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಸ್ವಾಗತಿಸುತ್ತವೆÉ, ಹೊರತು ಹೊಸ ತೆರಿಗೆಯನ್ನಲ್ಲ. ಇದು ವಾಯುಮಾಲಿನ್ಯವನ್ನು ಕಾನೂನು ಬದ್ಧಗೊಳಿಸುವ ಕ್ರಮದಂತೆ ಕಾಣುತ್ತದೆ' ಎಂದು ವಾಹನೋದ್ಯಮದ ಪ್ರಮುಖ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಪರಿಣಾಮ
ಡೀಸಲ್‍ಗಿಂತ ಪೆಟ್ರೋಲ್ ದರದ ಅಂತರ ತುಂಬಾ ಹೆಚ್ಚಿರುವುದರಿಂದ ಹೆಚ್ಚುವರಿ ತೆರಿಗೆಯ ಕುರಿತು ಸಣ್ಣ ಡೀಸಲ್ ಕಾರು ಖರೀದಿದಾರರು ಹೆಚ್ಚು ತಲೆಕೆಡಿಸಿಕೊಳ್ಳುವ ಸೂಚನೆಯಿಲ್ಲ. ಆದರೆ ದೊಡ್ಡ ಎಸ್‍ಯುವಿ ಮತ್ತು ಪ್ರೀಮಿಯಂ ಸೆಡಾನ್ ಖರೀದಿದಾರರು 2-4 ಲಕ್ಷ ಹೆಚ್ಚು ಪಾವತಿಸಬೇಕಾಗುತ್ತದೆ. ಅಂದರೆ ಸುಮಾರು ಆರು ಲಕ್ಷದ ಕಾರಿಗೆ ಹೆಚ್ಚುವರಿಯಾಗಿ 1.5 ಲಕ್ಷ ಪಾವತಿಸಬೇಕಾದೀತು. 16 ಲಕ್ಷದ ಆಸುಪಾಸಿನಲ್ಲಿರುವ ಕಾರಿಗೆ ಹೆಚ್ಚುವರಿ ತೆರಿಗೆಯಾಗಿ ಸುಮಾರು 4 ಲಕ್ಷ ಪಾವತೀಸಬೇಕಾಗುತ್ತದೆ. ಈಗಾಗಲೇ ಸಣ್ಣ ಡೀಸಲ್ ಕಾರು ಹೊಂದಿರುವರು ಪ್ರತಿವರ್ಷ ಪರಿಸರ ಶುಲ್ಕವಾಗಿ ಸುಮಾರು 6 ಸಾವಿರದಷ್ಟು ಹೆಚ್ಚುವರಿ ಪಾವತಿಸಬೇಕು. 6 ಲಕ್ಷದ ಡೀಸಲ್ ಕಾರು ಹೊಂದಿದ್ದರೆ ವರ್ಷಕ್ಕೆ 24 ಸಾವಿರ ಪಾವತಿಸಬೇಕು. 16 ಲಕ್ಷ ಆಸುಪಾಸಿನ ಡೀಸಲ್ ಕಾರು ಹೊಂದಿರುವ ಕಾರು ಮಾಲಿಕ ವರ್ಷಕ್ಕೆ ಹಸಿರು ತೆರಿಗೆಯಾಗಿ ಸುಮಾರು 64 ಸಾವಿರ ಪಾವತಿಸಬೇಕಾಗುತ್ತದೆ.
ಯುರೋಪ್‍ನಲ್ಲಿ ಡೀಸಲ್ ಮತ್ತು ಪೆಟ್ರೋಲ್ ದರ ಸರಿಸುಮಾರು ಒಂದೇ ರೀತಿ ಇದೆ. ಅಮೆರಿಕದಲ್ಲಿ ಡೀಸಲ್ ಕಾರುಗಳ ಪ್ರಮಾಣ ಕಡಿಮೆ ಇದೆ. ಶ್ರೀಲಂಕಾ, ಬ್ರೆಝಿಲ್‍ನಲ್ಲಿ ಡೀಸಲ್ ಕಾರುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಡೆನ್ಮಾರ್ಕ್‍ನಲ್ಲೂ ಡೀಸಲ್ ಕಾರಿಗೆ ಅತ್ಯಧಿಕ ತೆರಿಗೆ ವಿಧಿಸಲಾಗುತ್ತದೆ. ಚೀನಾದಲ್ಲಿ ಡೀಸಲ್ ಮತ್ತು ಪೆಟ್ರೋಲ್ ಕಾರುಗಳಿಗೆ ಒಂದೇ ರೀತಿಯ ತೆರಿಗೆ ಇದೆ.

ಮಾಲಿನ್ಯ ನಿಯಂತ್ರಣ

ಯುರೋಪ್‍ನ ಡೀಸಲ್ ಕಾರುಗಳಿಗೆ ಹೋಲಿಸಿದರೆ ದೇಶದ ಡೀಸಲ್ ಕಾರುಗಳು ಹೆಚ್ಚು ಇಂಧನ ಬಳಕೆ ಮಾಡುತ್ತವೆ. ಸ್ವಚ್ಛ ಡೀಸಲ್ ಬಳಕೆ ಮಾಡುವ ಕುರಿತು ಸರಕಾರ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಕಳೆದ ಒಂದು ದಶಕದಿಂದ ವೈಯಕ್ತಿಕ ವಾಹನವಾಗಿ ಡೀಸಲ್ ಕಾರುಗಳ ಬಳಕೆ ಶೇಕಡ 105ರಷ್ಟು ಏರಿಕೆ ಕಂಡಿದೆ. ವಾಯುಮಾಲಿನ್ಯ ಹೆಚ್ಚಾಗಲು ಸಹ ಡೀಸಲ್ ಕಾರುಗಳು ಕಾರಣವಾಗುತ್ತಿವೆ ಎಂದು ದೇಶದ ಪರಿಸರ ಮತ್ತು ವಿಜ್ಞಾನ(ಸಿಎನ್‍ಸಿ) ಕೇಂದ್ರ ಅಭಿಪ್ರಾಯಪಟ್ಟಿದೆ.

ದುಬಾರಿ ಪೆಟ್ರೋಲ್ ದರಕ್ಕೆ ಹೋಲಿಸಿದರೆ ಯಾವುದೇ ಹೆಚ್ಚುವರಿ ತೆರಿಗೆಯು ಡೀಸಲ್ ಸಣ್ಣಕಾರು ಖರೀದಿದಾರರನ ಮೇಲೆ ಪರಿಣಾಮ ಬೀರದು ಎಂದು ವಾಹನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಭವಿಷ್ಯದಲ್ಲಿ ಡೀಸಲ್ ಕಾರಿಗೆ ಸರಕಾರ ಯಾವ ರೀತಿಯ ಮೂಗುದಾರ ಹಾಕಲಿದೆ ಎನ್ನುವುದು ಇನ್ನೂ ಅಸ್ಪಷ್ಟ. ಅಲ್ಲಿವರೆಗೆ ಡೀಸಲ್ ಕಾರು ಖರೀದಿದಾರರಿಗೂ ಗೊಂದಲ ಮುಂದುವರೆಯಲಿದೆ. 

No comments