ಅಗ್ಗದ ಸಗ್ಗ bmw low cost car india

Share:
Photo source: BMW Blog

ಅಗ್ಗದ ಸಗ್ಗ


ಲಗ್ಷುರಿ ವಾಹನ ಕಂಪನಿಗಳು ಕಡಿಮೆ ದರಕ್ಕೆ ಅದ್ಧೂರಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಟ್ರೆಂಡ್ ಆರಂಭವಾಗಿದೆ. ಈ ಕೆಟಗರಿಯಲ್ಲಿ ಬಂದಿರುವ ಬಿಎಂಡಬ್ಲ್ಯು ನೂತನ 1 ಸೀರಿಸ್ ಕಾರಿನ ಎಕ್ಸ್‍ಪರ್ಟ್ ರಿವ್ಯೂ ಇಲ್ಲಿದೆ.

ದೇಶದ ಐಷಾರಾಮಿ ವಾಹನ ಮಾರುಕಟ್ಟೆಯಲ್ಲೀಗ ಇಪ್ಪತ್ತು ಲಕ್ಷ ರೂಪಾಯಿ ಆಸುಪಾಸಿನಲ್ಲಿ ಕಾರುಗಳು ದೊರಕುತ್ತಿವೆ. ಜಗತ್ತಿನ ಅಗ್ರ ಅದ್ಧೂರಿ ಕಾರು ಕಂಪನಿಗಳು ಇಲ್ಲಿ ಪೈಪೆÇೀಟಿಗೆ ಬಿದ್ದು ಕಾರುಗಳನ್ನು ಮಾರಾಟ ಮಾಡುತ್ತಿರುವ ಪರಿಣಾಮವಿದು. ಔಡಿ, ಮರ್ಸಿಡಿಸ್ ಬೆಂಝ್, ವೊಲ್ವೊ ಕಂಪನಿಗಳ ಕಾರುಗಳಿಗೆ ಪೈಪೆÇೀಟಿ ನೀಡುವಂತೆ ಬಿಎಂಡಬ್ಲ್ಯು ಕಂಪನಿಯು 21 ಲಕ್ಷ ರೂಪಾಯಿ ಆರಂಭಿಕ ದರದಲ್ಲಿ ಕಾರೊಂದನ್ನು ಮಾರುಕಟ್ಟೆಗೆ ಬಿಟ್ಟಿದೆ. ಅದರ ಹೆಸರು ಬಿಎಂಡಬ್ಲ್ಯು 1 ಸೀರಿಸ್. ದರ: 20.90 ಲಕ್ಷದಿಂದ 25.90 ಲಕ್ಷದವರೆಗಿದೆ.
ಆವೃತ್ತಿಗಳು: ಚೆನ್ನೈನ ಬಿಎಂಡಬ್ಲ್ಯು ಘಟಕದಲ್ಲಿ ಉತ್ಪಾದಿಸಲಾಗುತ್ತಿರುವ ನೂತನ 1 ಸೀರಿಸ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯ. ಪೆಟ್ರೋಲ್ ಎಂಜಿನ್‍ನಲ್ಲಿ 116ಐ ಮಾತ್ರವಿದೆ. ಡೀಸೆಲ್ ಎಂಜಿನ್‍ನಲ್ಲಿ 118ಡಿ, 118ಡಿ ಸ್ಪೋರ್ಟ್ ಮತ್ತು 118ಡಿ ಸ್ಪೋರ್ಟ್ ಪ್ಲಸ್ ಎಂಬ ಮೂರು ಆಯ್ಕೆಗಳಿವೆ.  ಇವುಗಳಲ್ಲಿ ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಹೆಚ್ಚು ಶಕ್ತಿಶಾಲಿಯಾಗಿದ್ದು, ಅತ್ಯುತ್ತಮ ಫೀಚರ್‍ಗಳನ್ನು ಹೊಂದಿದೆ.
ವಿನ್ಯಾಸ: ಇದು ಅದ್ಭುತ ವಿನ್ಯಾಸದ ಅಂದದ ಕಾರು. ದೊಡ್ಡದಾದ ವೀಲ್‍ಬೇಸ್, ಸ್ಪೋರ್ಟಿಲುಕ್ ಸೇರಿದಂತೆ ಸಿಟಿ ರಸ್ತೆಯಲ್ಲಿ ಎದ್ದು ಕಾಣುವಂತಹ, ಎಲ್ಲರೂ ಗುರುತಿಸುವಷ್ಟು ಚಂದದ ಕಾರಿದು. ಕಿಡ್ನಿ ಆಕಾರದ ದೊಡ್ಡ ರೇಡಿಯೇಟರ್ ಗ್ರಿಲ್, ಬೋಲ್ಡಾಗಿ ಕಾಣುವ ಹೆಡ್‍ಲೈಟ್‍ಗಳು ಮತ್ತು ಮೂರು ವಿಭಾಗದ ಏರ್ ಇಂಟೇಕ್ ಇತ್ಯಾದಿಗಳು ಕಾರಿನ ಸೌಂದರ್ಯವನ್ನು ಭರ್ಜರಿಯಾಗಿಸಿವೆ.
ಫೀಚರ್‍ಗಳು: ಏರ್‍ಕಂಡಿಷನ್, ಸೆಂಟ್ರಲ್ ಲಾಕಿಂಗ್, ಪವರ್ ಸ್ಟಿಯರಿಂಗ್, ಪವರ್ ವಿಂಡೋಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟಿಯರಿಂಗ್ ವೀಲ್, ಮ್ಯಾನುಯಲ್ ಸೀಟ್ ಹೊಂದಾಣಿಕೆ, ರಿಯರ್ ಡಿಫಾಗರ್, ರಿಯರ್ ವಾಷ್/ವೈಪ್ ಸೇರಿದಂತೆ ಅದ್ಧೂರಿ ಕಾರಿನಲ್ಲಿರಬೇಕಾದ ಹೆಚ್ಚಿನ ಆರಾಮದಾಯಕ ಫೀಚರ್‍ಗಳಿವೆ. ಸುರಕ್ಷತೆಯ ಸವಾರಿಗಾಗಿ ಎಬಿಎಸ್, ಇಬಿಡಿ, ಆರು ಏರ್‍ಬ್ಯಾಗ್‍ಗಳು, ಟ್ರಾಕ್ಸನ್ ಕಂಟ್ರೋಲ್, ದೃಢತೆಯ ಚಾಲನೆಗಾಗಿ ಇಎಸ್‍ಪಿ, ಎಂಜಿನ್ ಇಮೊಬಿಲೈಝರ್, ಚೈಲ್ಡ್ ಸೇಫ್ಟ್ ಲಾಕ್ಸ್ ಇತ್ಯಾದಿ ಸೇಫ್ಟಿ ಫೀಚರ್‍ಗಳಿವೆ.
ಪವರ್: ಇದರಲ್ಲಿರುವ ಪೆಟ್ರೋಲ್ ಎಂಜಿನ್ ಬಿಎಂಡಬ್ಲ್ಯು ಮಿನಿ ಕಾರುಗಳಲ್ಲಿಯೂ ಇದೆ.  ಬಿಎಂಡಬ್ಲ್ಯು ಟ್ವಿನ್ ಪವರ್ ಟರ್ಬೊ ಎಂಜಿನ್ ನೂತನ 1 ಸೀರಿಸ್ ಕಾರಿನಲ್ಲಿದೆ. ಇದರ ಕಾರ್ಯಕ್ಷಮತೆ, ಪವರ್ ಡೆಲಿವರಿ ಅನನ್ಯ. ಡೀಸೆಲ್ ಎಂಜಿನ್ 143 ಹಾರ್ಸ್‍ಪವರ್ ಮತ್ತು 320 ಎನ್‍ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 212 ಕಿ.ಮೀ. ವೇಗದಲ್ಲಿ ಹೋಗಬಹುದಾಗಿದೆ. ಸೊನ್ನೆಯಿಂದ 100 ಕಿ.ಮೀ. ವೇಗವನ್ನು ಕೇವಲ 8.6 ಸೆಕೆಂಡಿನಲ್ಲಿ ಪಡೆಯಬಹುದಾಗಿದೆ.
ನೂತನ ಟ್ವಿನ್ ಪವರ್ ಟರ್ಬೊ ಫೆÇೀರ್ ಲೀಟರ್ ಪೆಟ್ರೋಲ್ ಎಂಜಿನ್ ಸಹ ಅತ್ಯುತ್ತಮ ದಕ್ಷತೆ ಮತ್ತು ಅನನ್ಯ ತಂತ್ರಜ್ಞಾನಗಳೊಂದಿಗೆ ಬಂದಿದೆ. ಇದು ಇಂಧನ ಕುಡಿಯುವುದನ್ನು ಕಡಿಮೆ ಮಾಡುತ್ತದೆ ಮತ್ತು ಕಡಿಮೆ ಮಾಲಿನ್ಯ ಉಂಟು ಮಾಡುತ್ತದೆ. ಕಾರ್ಯಕ್ಷಮತೆಯೂ ಉತ್ತಮವಾಗಿದೆ. ಕಾರಿನ 8 ಸ್ಪೀಡ್ ಆಟೋಮ್ಯಾಟಿಕ್ ಗಿಯರ್‍ಬಾಕ್ಸ್ ಸ್ಮೂತಾದ ಚಾಲನೆಗೆ ಸಹಕರಿಸುತ್ತದೆ.
ಮೈಲೇಜ್: ಪೆಟ್ರೋಲ್ ಆವೃತ್ತಿಯ ಎಆರ್‍ಎಐ ಪ್ರಮಾಣಿಕೃತ ಮೈಲೇಜ್ ಪ್ರತಿಲೀಟರ್‍ಗೆ 16.28 ಕಿ.ಮೀ. ಇದೆ. ಡೀಸೆಲ್ ಆವೃತ್ತಿಗಳು ಪ್ರತಿಲೀಟರ್‍ಗೆ 20.58 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

ಟೆಸ್ಟ್ ಡ್ರೈವ್ ಅನುಭವ
ಈ ಕಾರನ್ನು ಜರ್ಮನಿಯ ಮ್ಯೂನಿಚ್ ನಗರ ಮತ್ತು ಹೆದ್ದಾರಿಗಳಲ್ಲಿ ಝಿಗ್‍ವೀಲ್ ಸಂಪಾದಕರಾದ ಆದಿಲ್ ಜಲ್ ದರ್ಕನವಾಲ ಟೆಸ್ಟ್ ಡ್ರೈವ್ ಮಾಡಿದ್ದಾರೆ. ಅವರ ಪ್ರಕಾರ ಇದು `ಸೌಂದರ್ಯದಲ್ಲಿ ಬಣ್ಣದ ಚಿಟ್ಟೆ, ವೇಗದಲ್ಲಿ ಜೇನೊಣ'.
ಬಿಎಂಡಬ್ಲ್ಯು 1 ಸೀರಿಸ್ ದೊಡ್ಡ ಎಂಜಿನ್ ಹೊಂದಿರುವ ಸಣ್ಣಕಾರು. ಇನ್‍ಲೈನ್ 6 ಸಿಲಿಂಡರ್ ಎಂಜಿನ್‍ನ ಈ ಕಾರು ರಿಯರ್ ವೀಲ್ ಡ್ರೈವ್ ಸಾಮಥ್ರ್ಯ ಹೊಂದಿದೆ. ನಾಲ್ಕು ಜನರು ಆರಾಮವಾಗಿ ಕುಳಿತು ಸವಾರಿ ಮಾಡಬಹುದು. ದರ ಕಡಿಮೆಯಾದರೂ ಸಾಕಷ್ಟು ಫೀಚರ್‍ಗಳೊಂದಿಗೆ ಪುಟ್ಟ ಅಚ್ಚರಿಯಾಗಿ ಕಾಣುತ್ತದೆ ಎಂದು ಆದಿಲ್ ಹೇಳುತ್ತಾರೆ.
ಟ್ರಾಫಿಕ್ ಕಡಿಮೆ ಇರುವ ಮುಂಜಾನೆಯಲ್ಲಿ ಮ್ಯೂನಿಚ್ ರಸ್ತೆಯಲ್ಲಿ ಡ್ರೈವ್ ಮಾಡಿದೆ. ಸಿಟಿಯಿಂದ ಹೆದ್ದಾರಿಗೆ ಪ್ರಯಾಣ ಬೆಳೆಸಿದಾಗ `ಇದು ಸಿಟಿ ರಸ್ತೆಗೆ ಸೂಕ್ತ ಕಾರು' ಎಂಬ ನನ್ನ ಅಭಿಪ್ರಾಯವನ್ನು ಬದಲಾಯಿಸಿತು. ಆರು ಸಿಲಿಂಡರ್‍ನ ನಿಜವಾದ ಶಕ್ತಿ ಗೊತ್ತಾಗಬೇಕಾದರೆ ಇದನ್ನು ಹೆದ್ದಾರಿಯಲ್ಲಿ ಡ್ರೈವ್ ಮಾಡಬೇಕು. ಹಗರ ಸ್ಟಿಯರಿಂಗ್, ರಸ್ತೆಯಲ್ಲಿ ಉತ್ತಮ ಹಿಡಿತ, ಹೇರ್‍ಪಿನ್ ತಿರುವುಗಳಲ್ಲಿ, ಕುರುಡು ಸ್ಥಾನದಲ್ಲಿ(ಬ್ಲೈಂಡ್ ಸ್ಪಾಟ್) ಉಳಿದ ಅದ್ಧೂರಿ ಕಾರುಗಳಂತೆ ಕಷ್ಟಕರವಲ್ಲದ ಚಾಲನೆಗೆ ಸಹಕರಿಸುತ್ತದೆ. ಇದರಲ್ಲಿ ಐಡ್ರೈವ್ ಕಂಟ್ರೋಲರ್ ಇದ್ದು, ಕಾರನ್ನು ತಿರುಗಿಸುವಾಗ ಉತ್ತಮ ಹಿಡಿತ ಹೊಂದಿದೆ.
ಕಾರಿನ ಗಾತ್ರ ಪುಟ್ಟದಾಗಿರುವುದಾರಿಂದ ಸಹಜವಾಗಿಯೇ ಸ್ಥಳಾವಕಾಶ ಕೊಂಚ ಕಡಿಮೆಯಾಗಿದೆ. ನಾಲ್ಕು ಜನರು ಆರಾಮವಾಗಿ ಕುಳಿತುಕೊಳ್ಳಬಹುದು. 360 ಲೀಟರ್‍ನಷ್ಟು ಲಗೇಜ್ ಸ್ಥಳಾವಕಾಶ ಇದೆ. ಹಿಂಭಾಗದ ಸೀಟನ್ನು ಮಡುಚಿದರೆ ಲಗೇಜ್ ಸ್ಥಳಾವಕಾಶ 1,200 ಲೀಟರ್ ಆಗುತ್ತದೆ. ಗಾತ್ರ ಕಡಿಮೆ ಆಗಿರುವುದರಿಂದ ಲಗೇಜ್ ಸ್ಥಳಾವಕಾಶವೂ ಕಡಿಮೆ ಇದೆ. ಒಟ್ಟಾರೆ ಇದು ಆಧುನಿಕ ಯುವ ಕುಟುಂಬಗಳಿಗೆ ಹೇಳಿಮಾಡಿಸಿದಂತಹ ಕಾರು ಎಂದು ಆದಿಲ್ ಜಲ್ ದರ್ಕನವಾಲ ಹೇಳುತ್ತಾರೆ.

- Praveen Chandra Puttur

No comments