ಖರೀದಿ ಸಲಹೆ: ಫಸ್ಟ್ ಬೆಸ್ಟ್ ಬೈಕ್

Share:
ಯಾರದ್ದೋ ಮಾತು ಕೇಳಿ ಖರೀದಿಸಿದ ಬೈಕ್ ಅಥವಾ ಸ್ಕೂಟರ್ ಕೆಲವೇ ದಿನಗಳಲ್ಲಿ ಬೇಸರ ಮೂಡಿಸಬಹುದು. ಛೇ, ತಪ್ಪು ಮಾಡಿಬಿಟ್ಟೆ, ಇದಕ್ಕಿಂತ ಅ ಬಂಡಿ ಖರೀದಿಸಿದ್ರೆ ಒಳ್ಳೇದಿತ್ತು.... ಎಂದೆಲ್ಲ ಅನಿಸಲು ಶುರುವಾಗಬಹುದು.

ತರುಣ ತರುಣಿಯರು, ಆಫೀಸ್ ಕೆಲಸಕ್ಕೆ ಹೋಗುವವರು ಸೇರಿದಂತೆ ಸಮಸ್ತ ದ್ವಿಚಕ್ರ ವಾಹನ ಸವಾರರನ್ನು ನೋಡಿದಾಗ, ನನ್ನಲ್ಲೂ ಒಂದು ಬೈಕ್ ಅಥವಾ ಸ್ಕೂಟರ್ ಇರುತ್ತಿದ್ದರೆ...
ಎಂಬ ಬಯಕೆಯು ಎನ್‍ಫೀಲ್ಡ್ ಬುಲೆಟ್ ಅಥವಾ ಹಾರ್ಲೆ ಡೇವಿಡ್ ಸನ್ ಬೈಕ್ ಎಂಜಿನ್ ಸದ್ದಿನಂತೆ ಹೆಚ್ಚಿನ ಬೈಕ್ ಆಕಾಂಕ್ಷಿಗಳ ಮನಸ್ಸಿನಲ್ಲಿ ಸದ್ದು ಮಾಡುತ್ತಿರುತ್ತದೆ. ಆದರೆ ರಸ್ತೆಯಲ್ಲಿ 38ಕ್ಕೂ ಮಿಕ್ಕಿ ಕಂಪನಿಗಳ 300ಕ್ಕೂ ಹೆಚ್ಚು ಬಗೆಯ ದ್ವಿಚಕ್ರ ವಾಹನಗಳನ್ನು ನೋಡುತ್ತಿರುವಾಗ ಯಾವುದನ್ನು ಖರೀದಿಸಲಿ? ಯಾವುದು ಬೆಸ್ಟ್ ಬೈಕ್? ಇತ್ಯಾದಿ ಯೋಚನೆಗಳಿಂದ ಮನಸ್ಸು ಗೊಂದಲದ ಗೂಡಾಗುವುದು ಸಹಜ.
`ಅವೆಂಜರ್ ಬೈಕ್ ಜಾಹೀರಾತುಗಳಲ್ಲಿ ಚೆನ್ನಾಗಿ ಕಾಣಿಸುತ್ತಿತ್ತು. ಸ್ನೇಹಿತರಲ್ಲಿ ಯಾರಲ್ಲೂ ಈ ಬೈಕ್ ಇರಲಿಲ್ಲ. ಡಿಫರೆಂಟ್ ಆಗಿರಲಿ ಎಂದು ಬುಲೆಟ್ ಆಕಾರದ ಅವೆಂಜರ್ ಬೈಕ್ ಖರೀದಿಸಿಬಿಟ್ಟೆ. ಆದರೆ ಒಂದೇ ತಿಂಗಳಲ್ಲಿ ಇದು ನನಗೆ ಸೂಟ್ ಆಗೋ ಬೈಕಲ್ಲ ಎಂಬ ಫೀಲಿಂಗ್ ಶುರುವಾಗಿಬಿಟ್ಟಿತ್ತು. ಒಂದೇ ವರ್ಷದಲ್ಲಿ ಅದನ್ನು ಸೇಲ್ ಮಾಡಿ ಪಲ್ಸರ್ 200 ಬೈಕ್ ಖರೀದಿಸಿದ್ದೀನಿ' ಎನ್ನುತ್ತಾರೆ ಮಡಿಕೇರಿಯ ರೋಹಿತ್ ಬಿಎನ್.
ಬೈಕ್ ಅಂದ್ರೆ ಪ್ರತಿಷ್ಠೆ, ಸ್ಥಾನಮಾನ, ಸೌಂದರ್ಯದ ಸಂಕೇತ. ಅದೊಂದು ದೀರ್ಘಕಾಲದ ಅಸೆಟ್. ಅದು ಕೆಲವು ವರ್ಷಗಳಾದರೂ ನಮ್ಮ ಜೊತೆಗಿರುವ ಸಂಗಾತಿ. ಬೈಕ್ ಅಥವಾ ಸ್ಕೂಟರ್ ಖರೀದಿಸುವ ಮುನ್ನವೇ ಕೆಲವೊಂದು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೆ ನಂತರ ಕೊರಗುವುದು ತಪ್ಪುತ್ತದೆ.

ಎಷ್ಟು ಹಣವಿದೆ?
ಪೂರ್ತಿ ದುಡ್ಡು ಒಮ್ಮೆಲೆ ಪಾವತಿಸುವಿರೋ ಅಥವಾ ಒಂದಿಷ್ಟು ಮೊತ್ತ ಡೌನ್‍ಪೇಮೆಂಟ್ ಮಾಡಿ ಬೈಕ್ ಖರೀದಿಸಿ ಹಣವನ್ನು ಕಂತುಗಳಲ್ಲಿ ಕಟ್ಟುವಿರೋ... ಆಯ್ಕೆ ನಿಮ್ಮದು. ಆದರೆ ಕೆಲವು ಬ್ಯಾಂಕುಗಳು ದ್ವಿಚಕ್ರ ವಾಹನ ಸಾಲ ನೀಡಲು ಹಿಂದೆ ಮುಂದೆ ನೋಡುತ್ತವೆ. `ಸಾಲಗಾರ ಕಂತು ಸರಿಯಾಗಿ ಪಾವತಿಸದೆ ಇದ್ದರೆ ಬೈಕ್ ಜಪ್ತಿ ಮಾಡಬೇಕಾಗುತ್ತದೆ. ಆತನನ್ನು ಹುಡುಕಿಕೊಂಡು ಹೋಗುವುದು, ನೀಡಿದ ವಿಳಾಸದಲ್ಲಿ ಆತ ಇರದೆ ಇರುವುದು ಇವೆಲ್ಲ ಕಿರಿಕ್ ಉಂಟು ಮಾಡುತ್ತವೆ. ಜಪ್ತಿ ಮಾಡುವ ಹೊತ್ತಿಗೆ ಬೈಕ್ ಕಂಡಿಷನ್ ಕೂಡ ಹಾಳಾಗಿರುತ್ತದೆ. ಹೀಗಾಗಿ ಕಾರು ಸಾಲಕ್ಕೆ ಹೆಚ್ಚಿನ ಆದ್ಯತೆ' ಎಂದು ಕಾಪೆರ್Çೀರೇಷನ್ ಬ್ಯಾಂಕ್ ಮ್ಯಾನೆಜರೊಬ್ಬರು ಹೇಳುತ್ತಾರೆ.
ಬೈಕ್ ಅಥವಾ ಸ್ಕೂಟರ್ ಖರೀದಿಗೆÉ ಎಷ್ಟು ಹಣ ಇನ್‍ವೆಸ್ಟ್ ಮಾಡುವಿರಿ ಎಂದು ತೀರ್ಮಾನಿಸಿಕೊಳ್ಳಿರಿ. ಆದರೆ ಇಂತಿಷ್ಟೇ ಮೊತ್ತ ಎಂದು ಸ್ಟಿಕ್ ಆಗದರಿ. ಅಂದರೆ ನಿಮ್ಮ ಬಜೆಟ್ 70 ಸಾವಿರವಾದರೆ, 75 ಸಾವಿರಕ್ಕಿಂತ ಅದಕ್ಕಿಂತ ಉತ್ತಮವಾದ ಬೈಕ್ ದೊರಕಬಹುದು. ಕೆಲವು ಸಾವಿರ ಜಾಸ್ತಿ ನೀಡಿದರೆ ಒಳ್ಳೆಯ ಬೈಕ್ ನಿಮ್ಮದಾಗುತ್ತದೆ. ಕೊಂಚ ತಡವಾದರೂ ಪರವಾಗಿಲ್ಲ. ಮೊದಲು ಖಚಿತವಾದ ಬಜೆಟ್ ತೀರ್ಮಾನಿಸಿಕೊಳ್ಳಿರಿ.

ಆಯ್ಕೆ ಹೇಗೆ?
ನಿಮ್ಮ ಬಜೆಟ್‍ಗೆ ಯಾವೆಲ್ಲ ಬೈಕ್/ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ತಿಳಿದುಕೊಳ್ಳಿ. ಕನಿಷ್ಠ ಹತ್ತು ಬೈಕಾದರೂ ಇದ್ದೇ ಇರುತ್ತವೆ. ಅವುಗಳಲ್ಲಿ ನಿಮಗೆ ಇಷ್ಟವಿರದ ಕಂಪನಿಗಳ ಬೈಕನ್ನು ಬಿಟ್ಟುಬಿಡಿ. ವಿನ್ಯಾಸ, ಸಿಸಿ ಪವರ್ ಇಷ್ಟವಾಗದ್ದನ್ನೂ ಬಿಟ್ಟುಬಿಡಿ. ಹತ್ತು ಬೈಕುಗಳಲ್ಲಿ ಎಲಿಮಿನೇಟ್ ಮಾಡುತ್ತ ಬಂದು ಕೊನೆಗೆ 3 ಬೈಕನ್ನು ಉಳಿಸಿ.

ಟೆಸ್ಟ್ ಡ್ರೈವ್
ಅಂತಿಮ ಪಟ್ಟಿಯಲ್ಲಿ ಉಳಿದ ಮೂರು ನಾಲ್ಕು ಬೈಕುಗಳನ್ನು ಶೋರೂಂಗೆ ಹೋಗಿ ಟೆಸ್ಟ್ ಡ್ರೈವ್ ಮಾಡಿನೋಡಿ. ಡೀಲರ್ ಹೇಳಿದ್ದನ್ನೆಲ್ಲ ನಂಬಬೇಡಿ. ಟೆಸ್ಟ್ ಡ್ರೈವ್ ಮಾಡಿದ ಬೈಕುಗಳಲ್ಲಿ ನಿಮಗೆ ಇಷ್ಟವಾದ ಎರಡು ಬೈಕ್‍ನ್ನು ಅಂತಿಮ ಪಟ್ಟಿಯಲ್ಲಿಟ್ಟುಬಿಡಿ. ಸ್ನೇಹಿತರು, ಪರಿಚಿತರ ಬಳಿ ಇದೇ ಮಾಡೆಲ್ ಬೈಕ್‍ಗಳು ಇದ್ದರೆ ರೈಡ್ ಮಾಡಿ ನೋಡಿರಿ. ಪ್ರಯಾಣದಲ್ಲಿ ಸಿಗುವ ಕಂಫರ್ಟ್, ಬೈಕ್ ತೂಕ, ಪವರ್, ಪಿಕಪ್, ಬೈಕ್ ಸ್ಟೈಲ್ ಸೇರಿದಂತೆ ನಿಮಗೆ ಇಷ್ಟವಾದ ಅಂಶ ಮತ್ತು ಇಷ್ಟವಾಗದ ಅಂಶಗಳನ್ನು ಪರಿಶೀಲನೆ ಮಾಡಿ.

ಆಯ್ಕೆ ನಿಮ್ಮದು
ಅಂತಿಮವಾಗಿ ನಿಮ್ಮ ಆತ್ಮಸಾಕ್ಷಿಗೆ ಇಷ್ಟವಾದ ಬೈಕನ್ನೇ ಆಯ್ಕೆ ಮಾಡಿಕೊಳ್ಳಿರಿ. ಯಾರೋ ಹೇಳಿದ್ದರೆಂದು, ಸ್ನೇಹಿತರಲ್ಲಿ ಇದೆಯೆಂದು ಯೋಚನೆ ಮಾಡದೆ ಖರೀದಿಸಬೇಡಿ. ಜೀವನ ಪೂರ್ತಿ ಜೊತೆಗಿರುವ ಸಂಗಾತಿಯ ಆಯ್ಕೆಯಂತೆ ವಾಹನ ಖರೀದಿಯಲ್ಲೂ ನಿಮ್ಮದೇ ಅಭಿಪ್ರಾಯ ಅಂತಿಮವಾಗಿರಲಿ.  ನೆನಪಿಡಿ, ಯಾವ ಕಂಪನಿಗಳೂ ಕೆಟ್ಟ ಬೈಕುಗಳನ್ನು ಮಾರುಕಟ್ಟೆಗೆ ಬಿಡುವುದಿಲ್ಲ. ಆದರೂ, ಇರುವುದರಲ್ಲಿ ಒಳ್ಳೆಯ ಬೈಕನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಒತ್ತು ನೀಡಿ. ಗುಡ್‍ಲಕ್.

No comments