ಹಬ್ಬಕ್ಕೆ ಯಾವ ಕಾರು?

Share:
ಹಬ್ಬಕ್ಕೆ ಯಾವ ಕಾರು ಖರೀದಿಸಲಿ ಎಂಬ ಗೊಂದಲದಿರುವರಿಗೆ ಕೆಲವು ಇಂಟ್ರೆಸ್ಟಿಂಗ್ ಕಾರುಗಳ ಮಾಹಿತಿ ಇಲ್ಲಿದೆ. ಇವು ಮಧ್ಯಮ ವರ್ಗ ಮತ್ತು ಅದಕ್ಕಿಂತ ಕೊಂಚ ಹೆಚ್ಚು ಕಾಸಿರುವ ವರ್ಗದವರ ಬಜೆಟಿಗೆ ಸೂಕ್ತವಾಗಿರುವ ಕಾರುಗಳು.
ವಿಜಯನೆಕ್ಸ್ಟ್ ನಲ್ಲಿ ಪ್ರಕಟಿತ

ಬಹುಶಃ ಈ ಹಬ್ಬದ ಅವಧಿಯಲ್ಲಿ ಹೊಸ ಕಾರೊಂದನ್ನು ಮನೆಗೆ ತರಲೇಬೇಕೆಂದು ನೀವು ಡಿಸೈಡ್ ಮಾಡಿಕೊಂಡಿರಬಹುದು. ಹಾಗಾದ್ರೆ ನಿಮಗೆ ಪೆಟ್ರೋಲಾ? ಡೀಸೆಲಾ?, ಚಿಕ್ಕದಾ? ದೊಡ್ಡದಾ?, ಸ್ಪೋಟ್ಸಾ? ಸೆಡಾನಾ? ಹೀಗೆಲ್ಲ ಯೋಚಿಸಿ ತಲೆನೋವು ಶುರುವಾಗಿರೊದಂತೂ ಗ್ಯಾರಂಟಿ.


ತಲೆಕೆಡಿಸ್ಕೊಬೇಡಿ, ಈ ವರ್ಷ ರಸ್ತೆಗಿಳಿದ ಕೆಲವು ಇಂಟ್ರೆಸ್ಟಿಂಗ್ ಕಾರುಗಳ ಮಾಹಿತಿ ಇಲ್ಲಿದೆ. ಪೂರಕವಾಗಿ ಕಳೆದ ವರ್ಷ ಬಂದ ಕೆಲವು ಕಾರುಗಳ ಉಲ್ಲೇಖವೂ ಇದೆ. ಆದರೆ ಅದ್ಧೂರಿ ಕಾರುಗಳನ್ನು ಇಲ್ಲಿ ನೆನಪಿಸಲಾಗಿಲ್ಲ. ಮಧ್ಯಮ ವರ್ಗ ಮತ್ತು ಅದಕ್ಕಿಂತ ಕೊಂಚ ಹೆಚ್ಚು ಕಾಸಿರುವ ವರ್ಗದವರ ಬಜೆಟಿಗೆ ಸೂಕ್ತವಾಗಿರುವ ಕಾರುಗಳಿವು.

ಮಾರುತಿಯಿಂದಲೇ ಆರಂಭಿಸೋಣ. ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿರುವ ಅಗ್ಗದ ಆಲ್ಟೊ 800 ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ ಇದು ಬುಕ್ಕಿಂಗ್ ಆಗಿ ಮನೆ ಸೇರುವಷ್ಟರಲ್ಲಿ ಹಬ್ಬ ಮುಗಿದು, ಹೊಸ ವರ್ಷವೂ ಕಳೆಯಬಹುದೇನೋ. ಸ್ವಿಫ್ಟ್ ಕಾರಿಗೆ ವೇಟಿಂಗ್ ಪಿರೆಯಿಡ್ ಹೆಚ್ಚಿದೆ. ಆದ್ರೂ ಹಬ್ಬದ ಸೀಸನಿನಲ್ಲಿ ಇದು ಹೆಚ್ಚಿನವರ ಅಚ್ಚುಮೆಚ್ಚಿನ ಆಯ್ಕೆಯಾಗಬಹುದು. ಹಿಂಭಾಗದ ವಾರೆ ವಿನ್ಯಾಸದ ಕುರಿತು ತಕಾರಾರು ಇರದಿದ್ರೆ ಮಾರುತಿ ರಿಟ್ಜ್ ಖರೀದಿಸಬಹುದು. ಟೆಕ್ ವಿಷಯದಲ್ಲಿ ಸ್ವಿಫ್ಟ್ ಮತ್ತು ರಿಟ್ಜ್ ನಡುವೆ ಅಂತಹ ಭಿನ್ನತೆಯೇನಿಲ್ಲ. ಇತ್ತೀಚೆಗೆ ಡೀಸೆಲ್ ರಿಟ್ಜ್ ಸಹ ಬಂದಿದೆ. ಅಥವಾ ಎತ್ತರದ ಹುಡುಗ ಖ್ಯಾತಿಯ ವ್ಯಾಗನಾರ್ ಸಹ ಖರೀದಿಸಬಹುದು. ಈ ವರ್ಷ ವ್ಯಾಗನಾರ್ ಪೆÇ್ರ ಆಗಮಿಸಿದೆ. ಎಂಯುವಿ ಸೆಗ್ಮೆಂಟಿನಲ್ಲಿ ಬಂದ ಮಾರುತಿ ಎರ್ಟಿಗಾ ಸಹ ಈ ವರ್ಷದ ಇಂಟ್ರೆಸ್ಟಿಂಗ್ ಕಾರು.

ಎಸ್‍ಯುವಿ ಸ್ಪೆಷಲಿಸ್ಟ್ ಮಹೀಂದ್ರ ಯಾಕೋ ಹೆಚ್ಚು ಸುದ್ದಿಯಲ್ಲಿದೆ. ಕಳೆದ ವರ್ಷ ರಸ್ತೆಗಿಳಿದ ಎಕ್ಸ್‍ಯುವಿ500 ಹವಾ ಇನ್ನೂ ಮುಗಿದಿಲ್ಲ. ಈ ಹಬ್ಬಕ್ಕೆ ನೀವು ಎಕ್ಸ್‍ಯುವಿ ಅಥವಾ ಗ್ಷೈಲೊ ಖರೀದಿಸಬಾರದೇಕೆ? ಬಿಡಿ ಸಾರ್, ಅಷ್ಟು ದುಡ್ಡು ನಮ್ಮಲ್ಲಿಲ್ಲ ಅಂತಿರಾ? ಹಾಗಾದರೆ ಇತ್ತೀಚೆಗೆ ಬಂದ ಅಗ್ಗದ ಸಣ್ಣ ಎಸ್‍ಯುವಿ ಕ್ವಾಂಟೊ ಖರೀದಿಸಬಹುದಲ್ವ?

ಹ್ಯುಂಡೈ ಸಣ್ಣಕಾರು ಬೇಕಿದ್ರೆ ಇಯಾನ್ ಖರೀದಿಸಬಹುದು. ಆರು ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಿದ್ರೆ ಐ10, ಐ20, ವೆರ್ನಾ ಸಹ ಉತ್ತಮ ಆಯ್ಕೆಗಳು. ಆದ್ರೆ ಇವೆಲ್ಲ ಈ ವರ್ಷ ಬಂದ ಕಾರುಗಳಲ್ಲ. ಈ ವರ್ಷ ಬಂದ ಹ್ಯುಂಡೈ ಕಾರೇ ಬೇಕು ಅಂತ ನೀವು ಹಠ ಹಿಡಿದ್ರೆ ಹೊಸ ಎಲಾಂಟ್ರಾ ಖರೀದಿಸಬಹುದು. ಆದ್ರೆ ಅದು ಕೊಂಚ ದುಬಾರಿ.

ನಿಸಾನ್ ಹೊಸ ಕಾರು ಖರೀದಿಸುವಿರಾದರೆ ಇವಾಲಿಯಾ ಕಡೆಗೊಮ್ಮೆ ದೃಷ್ಟಿ ಹರಿಸಬಹುದು. ಮಾರುತಿ ಆಮ್ನಿ ತರಹದ ಸ್ಲೈಡಿಂಗ್ ಡೋರ್ ಇರುವ ಇವಾಲಿಯಾದ ವಿನ್ಯಾಸ ಅಷ್ಟೇನೂ ಗಮನ ಸೆಳೆಯದು. ಕೆಲವರು ಅದನ್ನು ನಿಸಾನ್ ವ್ಯಾನ್ ಎಂದು ಟೀಕಿಸಿದ್ದಾರೆ. ಆದರೆ ಮೈಲೇಜ್, ಕಾರ್ಯಕ್ಷಮತೆ ವಿಷಯದಲ್ಲಿ ಬೆಸ್ಟ್ ಎನ್ನುವಂತಿದೆ. ಕಳೆದ ವರ್ಷ ಬಂದ ನಿಸಾನ್ ಸನ್ನಿ ಸಹ ಈ ಹಬ್ಬದ ಖರೀದಿಗೆ ಸೂಕ್ತ ಆಯ್ಕೆಯಾಗಬಹುದು. ಸನ್ನಿ ಡೀಸೆಲ್ ಆವೃತ್ತಿ ಈ ವರ್ಷ ಬಂದಿದೆ.

ರೆನೊ ಕಾರುಗಳು ಹೆಚ್ಚಾಗಿ ನಿಸಾನ್ ಕಾರುಗಳ ಪಡಿಯಚ್ಚು. ಅವುಗಳ ನಡುವಿನ ಒಪ್ಪಂದವೇ ಹಾಗಿದೆ. ಹೀಗಾಗಿ ರೆನೊ ಸ್ಕೇಲಾಕ್ಕೂ ನಿಸಾನ್ ಸನ್ನಿಗೂ, ಪಲ್ಸ್‍ಗೂ ಮೈಕ್ರಾಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಆದ್ರೆ ಈ ವರ್ಷ ಬಂದ ರೆನೊ ಸ್ಕೇಲಾ(ಸನ್ನಿ ತದ್ರೂಪಿ) ಪ್ರೀಮಿಯಂ ಲುಕ್ ಹೊಂದಿದ್ದು, ಕೊಂಚ ಅದ್ಧೂರಿ ಕಾರಿನಂತೆ ಭಾಸವಾಗುತ್ತ್ತದೆ. ಎಸ್‍ಯುವಿ ಕಾರೊಂದನ್ನು ಖರೀದಿಸುವ ಯೋಜನೆ ನಿಮಗಿದ್ದರೆ ರೆನೊ ಡಸ್ಟರ್ ಖರೀದಿಸಬಹುದು. ಎಸ್‍ಯುವಿ ಮಾರುಕಟ್ಟೆಯಲ್ಲಿ ಡಸ್ಟರ್ ಕಾರಿಗೆ ಈಗ ಭರ್ಜರಿ ಬೇಡಿಕೆಯಿದೆ.

ಟೊಯೊಟಾ ಇತ್ತೀಚೆಗೆ ಏರೋ ಎಂಬ ಹೊಸ ಇನ್ನೋವಾ ಆವೃತ್ತಿಯನ್ನು ಪರಿಚಯಿಸಿದೆ. ಅಷ್ಟು ದೊಡ್ಡ ಕಾರು ಖರೀದಿಸುವ ಆಲೋಚನೆ ನಿಮಗೆ ಇಲ್ಲದಿದ್ದರೆ ಎಟಿಯೋಸ್, ಲಿವಾ ಕಾರುಗಳತ್ತ ಗಮನಹರಿಸಬಹುದು. ಜನರಲ್ ಮೋಟಾರ್ಸ್ ಕಂಪನಿಯು ಸೈಲ್ ಎಂಬ ಹೊಸ ಕಾರು ಪರಿಚಯಿಸುವ ಪ್ಲಾನ್ ಹಾಕಿಕೊಂಡಿದೆ. ಅದಕ್ಕೆ ಕಾಯುವ ವ್ಯವಧಾನವಿಲ್ಲದಿದ್ದರೆ ಹಳೆಯ ಸ್ಪಾರ್ಕ್, ಕ್ಯಾಪ್ಟಿವಾ ಮುಂತಾದ ಷೆವರ್ಲೆ ಬ್ರಾಂಡ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೋಂಡಾ ಕಂಪನಿಯು ಈ ವರ್ಷ ವಿಶೇಷವಾದ ವಾಹನಗಳನ್ನು ಪರಿಚಯಿಸಲ್ಲ. ಆದರೆ ಬ್ರಿಯೊ, ಜಾಝ್, ಸಿಟಿ ಕಾರುಗಳು ಆಲ್‍ಟೈಂ ಫೇವರಿಟ್.ಈ ವರ್ಷ ಬಂದ ಸ್ಕೋಡಾ ಫೇಬಿಯಾ ಸ್ಕೌಟ್ ಕಾರಲ್ಲಿ  ಹಳೆಯ ಫೇಬಿಯಾಕ್ಕಿಂತ ಹೇಳಿಕೊಳ್ಳುವಂತಹ ಗಮನಾರ್ಹ ಬದಲಾವಣೆಗಳು ಕಾಣುತ್ತಿಲ್ಲ. ಪ್ರೀಮಿಯರ್ ಕಂಪನಿ ಪರಿಚಯಿಸಿದ ರಿಯೊ ಎಸ್‍ಯುವಿ ಕೂಡ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಅನ್‍ಇಂಟ್ರೆಸ್ಟಿಂಗ್. 2012ರ ಟಾಟಾ ನ್ಯಾನೊ ಆವೃತ್ತಿಗಳು ಸಹ ನಿಮ್ಮ ಹಬ್ಬದ ಸಂಭ್ರಮ ಹೆಚ್ಚಿಸಬಹುದು.

ಸದ್ಯ ರಸ್ತೆಯಲ್ಲಿರುವ ನೂರಾರು ಬಗೆಯ ಕಾರುಗಳಲ್ಲಿ ಇವಿಷ್ಟು ಕಾರುಗಳನ್ನು ಹೆಕ್ಕಿ ನಿಮ್ಮ ಮುಂದಿಡಲಾಗಿದೆ. ಈ ಹಬ್ಬಕ್ಕೆ ಇವುಗಳಲ್ಲಿ ಯಾವ ಕಾರು ಖರೀದಿಸಬಹುದು ಅಂತ ಮತ್ತೆ ತಲೆಕೆಡಿಸಿಕೊಳ್ಳಿ!

ಕಾರು   ಎಕ್ಸ್ ಶೋರೂಂ ದರ  ಆನ್‍ರೋಡ್ ದರ   ಮೈಲೇಜ್(ಲೀಟರಿಗೆ)
ನಿಸಾನ್ ಇವಾಲಿಯಾ 8.64 ಲಕ್ಷ  10.16 ಲಕ್ಷ 19.3 ಕಿ.ಮೀ.
ಮಾರುತಿ ಎರ್ಟಿಗಾ6.15 ಲಕ್ಷ 7.54 ಲಕ್ಷ16.02 ಕಿ.ಮೀ.
ಮಹೀಂದ್ರ ಕ್ಷೈಲೊ8.37 ಲಕ್ಷ9.99 ಲಕ್ಷ17.21 ಕಿ.ಮೀ.
ಮಹೀಂದ್ರ ಕ್ವಾಂಟೊ6.08 ಲಕ್ಷ7.24 ಲಕ್ಷ17 ಕಿ.ಮೀ.
ರೆನೊ ಡಸ್ಟರ್8.20 ಲಕ್ಷ 9.79 ಲಕ್ಷ13-20 ಕಿ.ಮೀ.
ರೆನೊ ಸ್ಕೇಲಾ7.90 ಲಕ್ಷ9.40 ಲಕ್ಷ16.95 ಕಿ.ಮೀ.
ಟೊಯೊಟಾ ಇನ್ನೋವಾ ಏರೋ9.97 ಲಕ್ಷ 11.89 ಲಕ್ಷ7-11 ಕಿ.ಮೀ.
ಹ್ಯುಂಡೈ ಎಲಾಂಟ್ರಾ13.98 ಲಕ್ಷ17.11 ಲಕ್ಷ 13-16 ಕಿ.ಮೀ.

(ದರ: ರೂಪಾಯಿ. ಮೈಲೇಜ್: ಕಿ.ಮೀ)

(ಗಮನಿಸಿ: ಪ್ರತಿಕಾರಿನ ಬೇಸ್ ಆವೃತ್ತಿಯ ಬೆಂಗಳೂರು ದರ ಮಾಹಿತಿಯಿದು)

No comments