ಭವಿಷ್ಯದ ಸ್ಮಾರ್ಟ್ ಕಾರುಗಳು

Share:
ಗಂಟೆಗಟ್ಟಲೆ ಸಮಯ ವ್ಯರ್ಥಗೊಳಿಸುವ ಸಂಚಾರ ದಟ್ಟಣೆ, ದುಬಾರಿ ಇಂಧನ ದರ, ರಸ್ತೆಯಲ್ಲಿ ಅನಿರೀಕ್ಷಿತವಾಗಿ ಅಡ್ಡ ಬರುವ ಪಾದಚಾರಿಗಳು, ಗಂಟೆಗಟ್ಟಲೆ ಡ್ರೈವಿಂಗ್ ಮಾಡುವ ಶ್ರಮದಿಂದ ವಾಹನ ಚಾಲಕರಿಗೆ ಸಾಕಾಗಿ ಹೋಗಿರುತ್ತದೆ. ಆದರೆ ಭವಿಷ್ಯದಲ್ಲಿ ಇಂತಹ ಕಷ್ಟಕೋಟಲೆಗಳು ಇರಲಿಕ್ಕಲ್ಲ. ಮುಂದಿನ ಹತ್ತು ವರ್ಷಗಳಲ್ಲಿ ರಸ್ತೆಯಲ್ಲಿ ಮಹತ್ತರವಾದ ಬದಲಾವಣೆಯಾಗಲಿವೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿನೂತನ ಅನ್ವೆಷಣೆಗಳ  ನೆರವಿನಿಂದ ವಾಹನ ಚಾಲನೆ ಸರಳ, ಸುಲಭ ಮತ್ತು ಆರಾಮದಾಯಕವಾಗಿರಲಿದೆ. ಭವಿಷ್ಯದ ಕಾರುಗಳು ಹೇಗಿರಬಹುದು? ಮುಂದೆ ಓದಿ.


ಹಗುರ ಮತ್ತು ಸುಂದರ
ಭವಿಷ್ಯದ ಕಾರುಗಳು ಸ್ಮಾರ್ಟ್ ಆಗಿರಲಿವೆ. ಇವು ಈಗಿನಂತೆ ಟನ್‍ಗಟ್ಟಲೆ ತೂಕ ಹೊಂದಿರುವುದಿಲ್ಲ. ವಾಹನದ ಲೋಹದ ಬಿಡಿಭಾಗಗಳ ಸ್ಥಾನವನ್ನು ಹಗುರ ಸದೃಢ ಫೈಬರ್ ಬಿಡಿಭಾಗಗಳು ಆಕ್ರಮಿಸಲಿವೆ. ಹಗುರವಿದ್ದಷ್ಟು ವಾಹನಗಳ ಮೈಲೇಜ್, ಕಾರ್ಯದಕ್ಷತೆ ಹೆಚ್ಚಾಗುತ್ತದೆ.

ವಿಡಿಯೊ ಕ್ಯಾಮರಾ
ಕಾರಿನ ಒಳಗಿನಿಂದ ಹಿಂದೆ ತಿರುಗಿ, ಅಥವಾ ಕಿಟಕಿಯಿಂದ ಇಣುಕಿ ಕಾರಿನ ಆಸುಪಾಸಿನ ಸ್ಥಿತಿಗತಿ ಅವಲೋಕನ ಮಾಡುವ ಕಷ್ಟ ಭವಿಷ್ಯದ ಕಾರಿನಲ್ಲಿ ಇರುವುದಿಲ್ಲ. ಈಗ ಕಾರಿನಲ್ಲಿ ರಿವರ್ಸ್ ಪಾರ್ಕಿಂಗ್‍ಗೆ ಮಾತ್ರ ವಿಡಿಯೊ ಸಿಸ್ಟಮ್ ಇದೆ. ಆದರೆ ಭವಿಷ್ಯದ ಕಾರುಗಳಲ್ಲಿ ಕಾರಿನ ಸುತ್ತಮುತ್ತಲಿನ ಎಲ್ಲಾ ದೃಷ್ಯಗಳನ್ನು ಚಾಲಕನಿಗೆ ರವಾನಿಸುವ ವಿಡಿಯೊ ಕ್ಯಾಮರಾಗಳು ಇರಲಿವೆ. ಇವು  ರಸ್ತೆಯಲ್ಲಿರುವ ಸಂಚಾರಿ ಸಿಗ್ನಲ್‍ಗಳು, ಪಾದಚಾರಿಗಳು, ರಸ್ತೆಯಲ್ಲಿ ಅಡ್ಡಬರುವ ಪ್ರಾಣಿಗಳು, ವಸ್ತುಗಳನ್ನು ಗುರುತಿಸಿ ಚಾಲಕನಿಗೆ ಮಾಹಿತಿ ನೀಡಲಿವೆ.

ರೇಡರ್ ಸೆನ್ಸಾರ್
ಈಗಾಗಲೇ ಪಾದಚಾರಿಗಳು ಅಥವಾ ಯಾವುದಾದರೂ ವಸ್ತು ಅಡ್ಡ ಬಂದರೆ ಸ್ವಯಂ ಚಾಲಿತವಾಗಿ ಕಾರು ನಿಲ್ಲುವಂತಹ ವ್ಯವಸ್ಥೆಯನ್ನು ಕೆಲವು ವಿದೇಶಿ ಕಾರು ಕಂಪನಿಗಳು ರೂಪಿಸಿವೆ. ಕೆಲವೊಂದು ಐಷಾರಾಮಿ ಕಾರುಗಳಲ್ಲಿ ಈಗಾಗಲೇ ಇಂತಹ ಸೆನ್ಸಾರ್ ಅಳವಡಿಸಲಾಗಿದೆ. ಭವಿಷ್ಯದಲ್ಲಿ ಹೆಚ್ಚಿನ ಕಾರುಗಳು ಇಂತಹ ರೇಡರ್ ಸಂವೇದಕಗಳನ್ನು ಹೊಂದಿರಲಿವೆ. ಇದರಿಂದ ಅನಿರೀಕ್ಷಿತ ಅವಘಡಗಳ, ಅಪಘಾತಗಳ ಸಂಖ್ಯೆ ತೀರ ಕಡಿಮೆಯಾಗಲಿದೆ.

ಲೈಡರ್
ಬೆಳಕು ಪತ್ತೆ ಹಿಡಿಯುವ ವ್ಯವಸ್ಥೆ ಭವಿಷ್ಯದ ಕಾರುಗಳಲ್ಲಿರಲಿದೆ. ಕಾರು ಲೇಸರ್ ಬೆಳಕು ಬಳಸಿ ಕಾರಿನ ಸುತ್ತಮುತ್ತಲಿನ 360 ಡಿಗ್ರಿ ಪರಿಸರವನ್ನು ಅವಲೋಕಿಸಲು ಸಾಧ್ಯವಾಗಲಿದೆ.

ಜಿಪಿಎಸ್
ಈಗಾಗಲೇ ಕಾರು ಚಾಲನೆ ಮಾಡುವರಿಗೆ ತಾವಿರುವ ಸ್ಥಳದ ಮಾಹಿತಿ, ರಸ್ತೆ, ಹಾದಿಗಳ ಮಾಹಿತಿ ನೀಡುವ ಜಿಪಿಎಸ್ ಸಾಧನಗಳಿವೆ. ಭವಿಷ್ಯದಲ್ಲಿ  ಸುಧಾರಿತ ಜಿಪಿಎಸ್ ಸಾಧನಗಳು ಆಗಮಿಸಲಿವೆ. ಚಾಲಕ ವಾಹನ ಚಾಲನೆ ಮಾಡುತ್ತಲೇ ತನ್ನ ಸುತ್ತಮುತ್ತಲಿನ ಪರಿಸರ, ರಸ್ತೆ, ಹೋಗಬೇಕಾದ ಸ್ಥಳದ ದೂರ ಸೇರಿದಂತೆ ಹತ್ತು ಹಲವು ಮಾಹಿತಿಗಳನ್ನು ಪಡೆಯಬಹುದಾಗಿದೆ.

ಸೆಂಟ್ರಲ್ ಕಂಪ್ಯೂಟರ್
ಅಲ್ಟ್ರಾಸೊನಿಕ್ ಸಂವೇದಕಗಳು ಮತ್ತು ಚಕ್ರಗಳಿಗೆ ಅಳವಡಿಸಿರುವ ಸಂವೇದಕಗಳ ಮೂಲಕ ವಾಹನಗಳ ಹತ್ತಿರದಲ್ಲಿರುವ ವಸ್ತುಗಳ ಮಾಹಿತಿಯನ್ನು ಇಂತಹ ಕಂಪ್ಯೂಟರ್‍ಗಳು ಗ್ರಹಿಸಲಿವೆ.


ವಾಹ್..
* ಸೆಲ್ಫ್ ಹೀಲಿಂಗ್ ಕೋಟಿಂಗ್: ಕಾರುಗಳ ಪೇಂಟ್‍ನಲ್ಲಿ ಗೀರುಗಳಾದರೆ ಇಂತಹ ಸ್ವಯಂಲೇಪಿತ ಕೋಟಿಂಗ್ ಮೂಲಕ ಕಾರಿನ ಮೇಲ್ಮೈಯನ್ನು ಮೊದಲಿನ ರೂಪಕ್ಕೆ ತರುವ ವ್ಯವಸ್ಥೆ ಬರಲಿದೆ.
* ಒಲೆಡ್ ಲೈಟ್ ಮತ್ತು ಡಿಸ್‍ಪ್ಲೇಗಳು: ನೈಜ ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ಬೆಳಕು ಬೀರುವ ಒಲೆಡ್ ಲೈಟ್ ಮತ್ತು ಡಿಸ್‍ಪ್ಲೇಗಳು ಭವಿಷ್ಯದ ಕಾರುಗಳಲ್ಲಿ ಇರಲಿವೆ.
* ಟಚ್‍ಸ್ಕ್ರೀನ್ ಅಥವಾ ಸ್ಪರ್ಷ ಸಂವೇದಿ ಪರದೆಗಳು ಇರಲಿವೆ.
* ನೀವು ಕಾರು ಚಾಲನೆ ಮಾಡುತ್ತ ಸಾಗಿದಂತೆ ದಾರಿಯಲ್ಲಿರುವ ರೆಸ್ಟೂರೆಂಟ್, ಹೋಟೆಲ್ ಮತ್ತು ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ನೀಡುತ್ತಿರುತ್ತದೆ. ಹೋಟೆಲ್ ಎಲ್ಲಿದೆ ಎಂದು ಯಾರಲ್ಲೂ ವಿಚಾರಿಸುವ ಅಗತ್ಯವಿಲ್ಲ.
* ವೈ-ಫೈ ಸಂಪರ್ಕ: ಮನರಂಜನೆ ಮತ್ತು ಇತರ ಸೌಲಭ್ಯವಿರುವ ಕಂಪ್ಯೂಟರ್ ಅಪ್ಲಿಕೇಷನ್‍ಗಳು ಮನೆಯಲ್ಲಿರುವ ಕಂಪ್ಯೂಟರ್‍ಗೆ, ಕೆಲಸದ ಸ್ಥಳದಲ್ಲಿರುವ ನಿಮ್ಮ ಗ್ಯಾಡ್ಜೆಟ್‍ಗಳಿಗೆ, ಸ್ಮಾರ್ಟ್‍ಫೆÇೀನ್‍ಗಳಿಗೆ ರಿಮೋಟ್ ಕಂಟ್ರೋಲ್ ಮೂಲಕ ಸಂಪರ್ಕ ಕಲ್ಪಿಸಬಹುದು. ಒಟ್ಟಾರೆ ನಿಸ್ತಂತು ವ್ಯವಸ್ಥೆ ಮೂಲಕ ಕಾರಿನಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳು ದೊರಕಲಿವೆ.
*  ವಿದ್ಯುತ್ ಸಂಗ್ರಹ: ಕಾರಿನ ಡೋರ್ ಪ್ಯಾನೆಲ್‍ಗಳಲ್ಲಿ ಮರು ಉತ್ಪಾದಿಸಿದ ವಿದ್ಯುತ್‍ಗಳು ಸಂಗ್ರಹವಾಗುತ್ತವೆ.

ಏನು ಲಾಭ
* ಸ್ಮಾರ್ಟ್ ಕಾರುಗಳಲ್ಲಿ ಸ್ಟಿಯರಿಂಗ್ ವೀಲ್‍ಗಳು, ಪೆಡಲ್‍ಗಳು, ಗಿಯರ್ ಹಿಡಿಗಳು ಇರುವುದಿಲ್ಲ. ಇದರಿಂದ ವಾಹನದ ತೂಕ ಕಡಿಮೆಯಾಗಿ ಮೈಲೇಜ್ ಏರಿಕೆ ಕಾಣುತ್ತದೆ.
* ಇಂತಹ ಕಾರುಗಳನ್ನು ದೈಹಿಕವಾಗಿ ಅಸಮರ್ಥರಾಗಿರುವರು ಸಹ ಬಳಸಬಹುದು. ಅಂದರೆ ಕಾಲಿಲ್ಲದವರು, ಕೈಯಿಲ್ಲದವರಿಗೂ ವಾಹನ ಚಾಲನೆ ಮಾಡಲು ಸಾಧ್ಯವಿರುವಂತಹ ತಂತ್ರಜ್ಞಾನ ಬರಲಿದೆ.
* ವಾಹನಗಳಿಗೆ ಕಡಿಮೆ ವಿಮೆ ಕಟ್ಟಿದರೆ ಸಾಕು. ಯಾಕೆಂದರೆ ಅಪಘಾತವಾಗುವ ಸಂಭವವೇ ಇಲ್ಲದಿದ್ದರೆ ವಾಹನ ಅಪಘಾತ ವಿಮೆಯ ಅಗತ್ಯವಿಲ್ಲ.
* ಸಂಚಾರ ದಟ್ಟಣೆಗೂ ಈ ತಂತ್ರಜ್ಞಾನಗಳು ಪರಿಹಾರ ನೀಡುತ್ತವೆ. ಇದರಿಂದಾಗಿ ದೇಶದ ಉತ್ಪಾದಕತೆ ಹೆಚ್ಚಾಗಲಿದ. ಕಾರಿನಲ್ಲಿ ಸಂಚರಿಸುತ್ತಿರುವಾಗಲೇ ಆಫೀಸ್ ಕೆಲಸನೂ ಮಾಡಬಹುದು.
* ಕಾರನ್ನು ಸ್ಮಾರ್ಟ್‍ಫೆÇೀನ್‍ಗಳ ಮೂಲಕವೇ ಪಾರ್ಕಿಂಗ್ ಮಾಡಬಹುದಾದರೆ ಚಾಲಕರ ಶ್ರಮ ತಪ್ಪುತ್ತದೆ.
(ವಿಜಯಕರ್ನಾಟಕ ವಿದ್ಯಾರ್ಥಿ ಸಂಚಿಕೆಗಾಗಿ ಗೂಗಲ್ ಹುಡುಕಾಟದ ನೆರವಿನಿಂದ ಬರೆದದ್ದು)

No comments