ಅಗ್ಗದ ದೊಡ್ಡ ಕಾರು

Share:
ಎಲ್ಲರಿಗೂ ಇಕ್ಕಟ್ಟಿನ ಪುಟ್ಟ ಕಾರು ಇಷ್ಟವಾಗುವುದಿಲ್ಲ. ಆದರೆ ಐದಾರೇಳು ಸೀಟುಗಳಿರುವ ದೊಡ್ಡ ಕಾರು ಖರೀದಿಸೋಣವೆಂದರೆ ಹೆಚ್ಚು ಹಣ ನೀಡಬೇಕು. ಈ ವರ್ಷ ರಸ್ತೆಗಿಳಿದ ಅಗ್ಗದ ದೊಡ್ಡ ಕಾರುಗಳ ಮಾಹಿತಿ ಇಲ್ಲಿದೆ.
http://vijayanextepaper.com/Details.aspx?id=504&boxid=173345251


ದೊಡ್ಡ ಕುಟುಂಬವಿದ್ದವರಿಗೆ ಚಿಕ್ಕ ಕಾರು ಸಾಕಾಗುವುದಿಲ್ಲ. ಚಂದದ ಇನ್ನೋವಾ, ಸ್ಕ್ರಾರ್ಪಿಯೊ, ಸಫಾರಿ, ಫಾಚ್ರ್ಯುನರ್ ಮುಂತಾದ ಕಾರುಗಳು ಎಲ್ಲರ ಕೈಗೆಟಕುವುದಿಲ್ಲ. ಇವುಗಳ ದರವೇ ಹತ್ತಾರು ಲಕ್ಷವಿರುತ್ತದೆ. ಹೆಚ್ಚು ಸ್ಥಳಾವಕಾಶವಿರುವ
ಅಗ್ಗದ ಮಾರುತಿ ಆಮ್ನಿ ಈಗಿನ ಜಮಾನಕ್ಕೆ ಹೆಚ್ಚು ಇಷ್ಟವಾಗುತ್ತಿಲ್ಲ. ದುರಾದೃಷ್ಟವೆಂದರೆ ಈ ವರ್ಷ ಆಗಮಿಸಿದ ಕಾರುಗಳಲ್ಲಿ ಅಗ್ಗದ ದೊಡ್ಡ ಕಾರು ಹುಡುಕಿದರೆ ನಿರಾಶೆಯಾಗುತ್ತದೆ. ಅಲ್ಲಿ ನಮಗೆ ಆಯ್ಕೆಗೆ ಹೆಚ್ಚು ಅವಕಾಶವೇ ಇಲ್ಲ. ಎರ್ಟಿಗಾ, ಕ್ಷೈಲೊ, ಸುಮೊ ಗೋಲ್ಡ್ ಇರೋದ್ರಲ್ಲಿ ಪರವಾಗಿಲ್ಲವೆಂಬಂತೆ ಇದೆ.

ದೊಡ್ಡದ್ದೇ ಯಾಕೆ?
ದೊಡ್ಡ ಕಾರಿನ ಗತ್ತು ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ. ಲಗೇಜ್ ಸ್ಥಳಾವಕಾಶ ಮತ್ತು ಸೀಟಿನ ಸಂಖ್ಯೆ ಹೆಚ್ಚಿರುವುದರಿಂದ ಮತ್ತು ಹೆಚ್ಚಿನವುಗಳಲ್ಲಿ ಆಲ್ ವೀಲ್ ಡ್ರೈವ್ ಸಾಮರ್ಥ್ಯ ಇರುವುದರಿಂದ ಹೆಚ್ಚಿನ ಜನರು ದೊಡ್ಡ ಕಾರನ್ನು ಇಷ್ಟಪಡುತ್ತಾರೆ. ಸದೃಢತೆ, ಸುರಕ್ಷತೆಯ ವಿಷಯದಲ್ಲೂ ದೊಡ್ಡ ಕಾರು ಸೂಕ್ತ ಎಂದು ಕೆಲವು ವಾಹನ ತಜ್ಞರು ಅಭಿಪ್ರಾಯಪಡುತ್ತಾರೆ. ದೊಡ್ಡ ಕಾರು ಗಟ್ಟಿಮುಟ್ಟಾದ ಸಸ್ಪೆನ್ಷನ್ ವ್ಯವಸ್ಥೆ, ಸದೃಢ ಬಾಡಿ ವಿನ್ಯಾಸ ಹೊಂದಿರುತ್ತದೆ.
ದೊಡ್ಡ ಕಾರುಗಳಿಗೆ ಅವುಗಳದ್ದೇ ಆದ ಅವಗುಣಗಳು ಸಹ ಇವೆ. ಅವು ಹೆಚ್ಚು ಇಂಧನ ಬಳಸುತ್ತವೆ. ಕಡಿಮೆ ಮೈಲೇಜ್ ನೀಡುತ್ತವೆ. ಪಾರ್ಕಿಂಗ್ ಸ್ಥಳಾವಕಾಶ ಜಾಸ್ತಿ ಬೇಕು. ವಾತಾವರಣವನ್ನು ಹೆಚ್ಚು ಕಲುಷಿತಗೊಳಿಸುತ್ತವೆ. ಈ ಎಲ್ಲಾ ಡಿಮೆರಿಟ್ಸ್ ಹೊರತಾಗಿಯೂ ವಿಶಾಲ ಸ್ಥಳಾವಕಾಶವಿರುವ ಕಾರುಗಳನ್ನು ಹೆಚ್ಚಿನವರು ಖರೀದಿಸುತ್ತಾರೆ.

ಹೊಸತು ಯಾವುದಿದೆ?
ಈ ವರ್ಷ ರಸ್ತೆಗಿಳಿದ ದೊಡ್ಡ ಕಾರುಗಳಲ್ಲಿ ಎರ್ಟಿಗಾ ಪರವಾಗಿಲ್ಲವೆಂದೆನಿಸುತ್ತದೆ. ಇನ್ನೋವಾ ವಿನ್ಯಾಸ ಹೋಲುವ ಈ ಕಾರು ಹೆಚ್ಚು ದುಬಾರಿ ಅಲ್ಲ. ಇದರ ಬೆಂಗಳೂರು ಎಕ್ಸ್‍ಶೋರೂಂ ದರ 6.20 ಲಕ್ಷದಿಂದ 9 ಲಕ್ಷದವರೆಗೆ ಇದೆ. ಆನ್‍ರೋಡ್ ದರ 7.60 ಲಕ್ಷದಿಂದ 10.95 ಲಕ್ಷದವರೆಗಿದೆ. ಎರ್ಟಿಗಾ ಪೆಟ್ರೋಲ್ ಆವೃತ್ತಿ ಎಕ್ಸ್‍ಶೋರೂಂ ದರ 7 ಲಕ್ಷಕ್ಕಿಂತ ಕಡಿಮೆ ಇದೆ. 1.4 ಲೀಟರ್‍ನ ಕೆ- ಸರಣಿಯ ಪೆಟ್ರೋಲ್ ಎಂಜಿನ್ 94 ಹಾರ್ಸ್‍ಪವರ್ ಮತ್ತು 130 ಎನ್‍ಎಂ ಟಾರ್ಕ್ ಪವರ್ ನೀಡುತ್ತದೆ. ಏಳು ಸೀಟು ಇರುವ ಈ ಕಾರಿನಲ್ಲಿ ಲಗೇಜ್ ಸ್ಥಳಾವಕಾಶವೂ ತಕ್ಕಮಟ್ಟಿಗೆ ಇದೆ. ಆದರೆ ಹಿಂದಿನ ಸಾಲಿನಲ್ಲಿರುವ ಎರಡು ಚಿಕ್ಕ ಸೀಟುಗಳು ದೂರ ಪ್ರಯಾಣಕ್ಕೆ ಹೆಚ್ಚು ಕಂಫರ್ಟ್ ಆಗಿಲ್ಲ. ಕಂಪನಿಯ ಪ್ರಕಾರ ಎರ್ಟಿಗಾ ಮೈಲೇಜ್ ಸುಮಾರು 16 ಕಿ.ಮೀ. ಇದೆ. ಆದರೆ ಕಂಪನಿ ಹೇಳುವುದಕ್ಕಿಂತ ಒಂದೆರಡು ಕಿ.ಮೀ. ಕಡಿಮೆ ಮೈಲೇಜ್ ಸಿಗುತ್ತದೆ ಎಂದು ಎರ್ಟಿಗಾ ಕಾರು ಹೊಂದಿರುವ ಬೆಂಗಳೂರಿನ ಸುಶೃತ ಗೌಡ ಹೇಳುತ್ತಾರೆ.
ಈಗಲೂ ಹೆಚ್ಚಿನ ಜನರಿಗೆ ಟಾಟಾ ಸುಮೊ ಅಚ್ಚುಮೆಚ್ಚು. ಈ ವರ್ಷ ಆಗಮಿಸಿದ ಸುಮೊ ಗೋಲ್ಡ್‍ಗೆ ವಿಶಾಲ ಸ್ಥಳಾವಕಾಶ ವಿಷಯದಲ್ಲಿ ಹೆಚ್ಚು ಅಂಕ ನೀಡಬಹುದು. ಇದು ಜಿಎಕ್ಸ್, ಇಎಕ್ಸ್, ಎಲ್‍ಎಕ್ಸ್ ಮತ್ತು ಸಿಎಕ್ಸ್ ಆವೃತ್ತಿಗಳ್ಲಲಿ ದೊರಕುತ್ತದೆ. ಬೆಂಗಳೂರು ಎಕ್ಸ್‍ಶೋರೂಂ ದರ 5.55 ಲಕ್ಷದಿಂದ 7.15 ಲಕ್ಷದವರೆಗೆ ಇದೆ. ಆನ್‍ರೋಡ್ ದರ 6.86 ಲಕ್ಷದಿಂದ 8.79 ಲಕ್ಷದವರೆಗಿದೆ. 3 ಲೀಟರ್‍ನ ಕಾಮನ್ ರೇಲ್ ಡೀಸಲ್ ಎಂಜಿನ್ ಹೊಂದಿರುವ ಸುಮೊ ಗೋಲ್ಡ್ ಮೈಲೇಜ್ ಪ್ರತಿಲೀಟರ್‍ಗೆ ಸುಮಾರು 14.7 ಕಿ.ಮೀ. ಇದೆ. 
ಕೆಲವು ತಿಂಗಳ ಹಿಂದೆ ಆಗಮಿಸಿದ ಪುಟ್ಟ ಗಾತ್ರದ ಮಹೀಂದ್ರ ಕ್ವಾಂಟೊ ಸಹ ಏಳು ಸೀಟು ಹೊಂದಿದೆ. ಆದರೆ ಇದರ ಹಿಂಬದಿಯ ಎರಡು ಸೀಟುಗಳು ತುಂಬಾ ಇಕ್ಕಟ್ಟು. ಅದನ್ನು ಲಗೇಜ್ ಸ್ಥಳಾವಕಾಶವಾಗಿಯೂ ಪರಿವರ್ತಿಸಿಕೊಳ್ಳಬಹುದಾಗಿದೆ. ಇದು ಸಿ2, ಸಿ4, ಸಿ6 ಮತ್ತು ಸಿ8 ಆವೃತ್ತಿಗಳಲ್ಲಿ ದೊರಕುತ್ತದೆ. ಬೆಂಗಳೂರು ಎಕ್ಸ್‍ಶೋರೂಂ ದರ 6.09 ಲಕ್ಷದಿಂದ 7.69 ಲಕ್ಷದವರೆಗಿದೆ. ಆನ್‍ರೋಡ್ ದರ 7.32 ಲಕ್ಷದಿಂದ 9.23 ಲಕ್ಷದವರೆಗಿದೆ.

ಸಣ್ಣ ಕಾರು ಓಕೆ
ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ, ಅತ್ಯುತ್ತಮ ಮೈಲೇಜ್, ಕಡಿಮೆ ಪಾರ್ಕಿಂಗ್ ಇತ್ಯಾದಿ ಕಾರಣಗಳಿಂದ ಈಗ ಸಣ್ಣಕಾರುಗಳು ಸೂಕ್ತವೆಂದೆನಿಸುತ್ತದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ದೊಡ್ಡ ಕಾರಿನ ಇಂಧನ ಟ್ಯಾಂಕ್‍ಗೆ ಎಷ್ಟು ಇಂಧನ ತುಂಬಿಸಿದರೂ ಸಾಕಾಗುವುದಿಲ್ಲ. ಸಣ್ಣಕಾರುಗಳು ಕಡಿಮೆ ದರಕ್ಕೆ ದೊರಕುತ್ತವೆ. ಪಾರ್ಕಿಂಗ್ ಸಹ ಸುಲಭ. ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ. ಹೆಚ್ಚಿನ ಸಣ್ಣಕಾರುಗಳು ಕಡಿಮೆ ತೂಕ ಹೊಂದಿರುವುದರಿಂದ ಹೆಚ್ಚು ಮೈಲೇಜ್ ನೀಡುತ್ತವೆ. ಆದರೆ ಸಣ್ಣಕಾರಿನಲ್ಲಿ ಸುರಕ್ಷತೆಯ ಫೀಚರುಗಳು ಕಡಿಮೆ ಇರುತ್ತವೆ. ಸ್ಥಳಾವಕಾಶದ ವಿಷಯದಲ್ಲಿ ಸಣ್ಣಕಾರು ತುಂಬಾ ಇಕ್ಕಟ್ಟಿನಿಂದ ಕೂಡಿರುತ್ತದೆ. ಅತಿವೇಗದಲ್ಲಿ ಸಾಗಿದಾಗ ನಿಯಂತ್ರಣ ಕಷ್ಟ.
ಎಸ್‍ಯುವಿ, ಎಂಪಿವಿ, ಸಣ್ಣಕಾರಿನ ಸಂಗಮದಂತಿರುವ ಕ್ವಾಂಟೊ ಕಾರಿಗೆ ಪರವಾಗಿಲ್ಲವೆನ್ನುವಷ್ಟು ಬೇಡಿಕೆಯಿದೆ. ಆದರೆ ಟಾಟಾ ಸುಮೊ ಗೋಲ್ಡ್ ಮಾರಾಟ ಸಾಧಾರಣ. ಆದರೆ ಮಾರುತಿ ಎರ್ಟಿಗಾ ಕಾರಿಗೆ ಬೇಡಿಕೆ ಅತ್ಯುತ್ತಮವಾಗಿದೆ. ಈ ಕಾರುಗಳ ದರಕ್ಕಿಂತ ಹೆಚ್ಚು ಪಾವತಿಸಲು ಸಿದ್ಧರಿದ್ದರೆ ಉಳಿದ ವಿಶಾಲ ಸ್ಥಳಾವಕಾಶದ ಇನ್ನೋವಾ, ಸ್ಕ್ರಾರ್ಪಿಯೊ, ಸಫಾರಿ, ಫಾಚ್ರ್ಯುನರ್ ಮುಂತಾದ ಕಾರುಗಳತ್ತ ಗಮನಹರಿಸಬಹುದು.



ಕಾರು   ಎಕ್ಸ್ ಶೋರೂಂ ದರ ಆನ್‍ರೋಡ್ ದರ
ಮಾರುತಿ ಎರ್ಟಿಗಾ6.20-9 ಲಕ್ಷ7.60 - 10.95 ಲಕ್ಷ
ಮಹೀಂದ್ರ ಕ್ವಾಂಟೊ6.09 -7.69  ಲಕ್ಷ 7.32- 9.23 ಲಕ್ಷ
ಟಾಟಾ ಸುಮೊ ಗೋಲ್ಡ್5.55-7.15 ಲಕ್ಷ 6.86 -8.79  ಲಕ್ಷ

ದೊಡ್ಡ ಕಾರು
ಒಳಿತು: ಹೆಚ್ಚು ಸ್ಥಳಾವಕಾಶ, ಹೆಚ್ಚು ಸುರಕ್ಷತೆ, ಹೆಚ್ಚು ಸೀಟು, ನಿಯಂತ್ರಣ ಸುಲಭ
ಕೆಡುಕು:ಕಡಿಮೆ ಮೈಲೇಜ್, ಹೆಚ್ಚು ಪಾರ್ಕಿಂಗ್ ಸ್ಥಳಾವಕಾಶ, ವಾಯುಮಾಲಿನ್ಯ ಹೆಚ್ಚು

ಸಣ್ಣಕಾರು
ಒಳಿತು: ಕಡಿಮೆ ದರ, ಹೆಚ್ಚು ಮೈಲೇಜ್, ಪಾರ್ಕಿಂಗ್ ಸುಲಭ
ಕೆಡುಕು: ಕಡಿಮೆ ಸ್ಥಳಾವಕಾಶ, ವೇಗದಲ್ಲಿ ನಿಯಂತ್ರಣ ಕಷ್ಟ,


No comments