ಕಾರ್ ಕನ್‍ವರ್ಟ್

Share:
ನಿಮ್ಮಲ್ಲಿರುವ ಪೆಟ್ರೊಲ್/ಡೀಸೆಲ್ ಕಾರನ್ನು ಪೆಟ್ರೊಲ್-ಎಲೆಕ್ಟ್ರಿಕ್‍ಗೆ ಅಥವಾ ಡೀಸೆಲ್-ಎಲೆಕ್ಟ್ರಿಕ್ ಹೈಬ್ರಿಡ್ ಕಾರುಗಳಾಗಿ ಬದಲಾಯಿಸಿಕೊಳ್ಳಬಹುದೇ? 
http://vijayanextepaper.com/Details.aspx?id=939&boxid=174136453

ಕಾರಿನ ಇಂಧನ ಟ್ಯಾಂಕ್‍ನ ಹಸಿವಿಗೆ ಸಿಲುಕಿ ನಿಮ್ಮ ಪರ್ಸ್ ಸದಾ ಖಾಲಿ ಹೊಡೆಯುತ್ತಿರಬಹುದು. ಬೇಕಾಬಿಟ್ಟಿಯಾಗಿ ನಡುರಾತ್ರಿ ಏರೋ ಪೆಟ್ರೋಲ್/ಡೀಸಲ್ ದರ ನಿಮ್ಮ ನಿದ್ದೆ ಕಸಿದುಕೊಳ್ಳುತ್ತಿರಬಹುದು. ಕೊಂಚ ಹಣ ಉಳಿಯಲೆಂದು ಅಳವಡಿಸಿದ ಗ್ಯಾಸ್ ಕಿಟ್ ಸಹ ತೃಪ್ತಿ ನೀಡದೆ ಇರಬಹುದು. ಅತಿಪುಟ್ಟ ರೇವಾ ಎಲೆಕ್ಟ್ರಿಕ್ ಕಾರು ನಿಮಗೆ ಇಷ್ಟವಾಗದೆ ಇರಬಹುದು. ವಿದ್ಯುತ್ ಕಾರು ಖರೀದಿಯಲ್ಲೂ ಹೆಚ್ಚು ಆಯ್ಕೆಗಳಿಲ್ಲ.


ಹೊಸ ಆಶಾಕಿರಣ

ಪೆಟ್ರೋಲ್ ಕಾರಿನ ಇಂಧನ ದಕ್ಷತೆ ಹೆಚ್ಚಿಸಿಕೊಳ್ಳಲು ಅದಕ್ಕೆ ಸಿಎನ್‍ಜಿ ಮತ್ತು ಎಲ್‍ಪಿಜಿ ಕಿಟ್ ಅಳವಡಿಸಿಕೊಳ್ಳುವುದು ಸಾಮಾನ್ಯ. ಆದರೆ ಗ್ಯಾಸ್ ಕಿಟ್‍ನಂತೆ ಕಾರಿಗೆ ಎಲೆಕ್ಟ್ರಿಕ್ ಕಿಟ್ ಇದ್ದಿದ್ದರೆ ಚೆನ್ನಾಗಿರಬಹುದಿತ್ತಲ್ವೆ? ಕಾರುಗಳಿಗೆ ಇಂತಹ ವಿದ್ಯುತ್ ಕಿಟ್ ಅಳವಡಿಸಿಕೊಳ್ಳುವ ಅವಕಾಶ ಭವಿಷ್ಯದಲ್ಲಿ ದೊರಕುವ ಸೂಚನೆ ದಟ್ಟವಾಗಿದೆ. ಯಾಕೆಂದರೆ ದೇಶದ ಭಾರೀ ಉದ್ಯಮಗಳ ಸಚಿವಾಲಯವು ಇದಕ್ಕಾಗಿ ಹೊಸ ನೀತಿಯೊಂದನ್ನು ರೂಪಿಸುತ್ತಿದೆ. ಈ ನೀತಿಯು ಅನುಷ್ಠಾನಕ್ಕೆ ಬಂದರೆ ನಮ್ಮಲ್ಲಿರುವ ಪೆಟ್ರೋಲ್/ಡೀಸೆಲ್ ಕಾರುಗಳನ್ನು, ಸ್ಪೋಟ್ರ್ಸ್ ಯುಟಿಲಿಟಿ ವಾಹನಗಳನ್ನು ಪೆಟ್ರೊಲ್-ಎಲೆಕ್ಟ್ರಿಕ್‍ಗೆ ಅಥವಾ ಡೀಸೆಲ್-ಎಲೆಕ್ಟ್ರಿಕ್ ಹೈಬ್ರಿಡ್ ಕಾರುಗಳಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಅಂದರೆ ಪೆಟ್ರೋಲ್ ಎಂಜಿನ್ ಜೊತೆಜೊತೆಗೆ ಎಲೆಕ್ಟ್ರಿಕ್ ಕಿಟ್ ಅಳವಡಿಸಿಕೊಳ್ಳಬಹುದಾಗಿದೆ.

ರಿವೊಲೊ
ದೇಶದ ಭಾರೀ ಉದ್ಯಮಗಳ ಸಚಿವಾಲಯವು ಎಲೆಕ್ಟ್ರಿಕ್ ಕಿಟ್‍ನ ಸಾಧಕ ಬಾಧಕಗಳನ್ನು ಪರಿಶೀಲಿಸುತ್ತಿದೆ. ತಾಂತ್ರಿಕವಾಗಿ ಇದು ಕಷ್ಟಕರವಲ್ಲವೆಂದು ಹಲವು ವಾಹನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಈ ನಿಟ್ಟಿನಲ್ಲಿ ಕೆಪಿಐಟಿ ಕ್ಯೂಮಿನ್ಸ್ ಮತ್ತು ಭಾರತ್ ಫೆÇೀರ್ಜ್ ಕಂಪನಿಯು ಜಂಟಿಯಾಗಿ ರಿವೊಲೊ ಹೆಸರಿನ ಹೊಸ ಕಿಟ್ ಅಭಿವೃದ್ಧಿಪಡಿಸಿದೆ. ಇದು ಮಾರುಕಟ್ಟೆಗೆ ಆಗಮಿಸಲು ಸಿದ್ಧವಾಗಿದೆ. ಆದರೆ ಇದಕ್ಕಿನ್ನು ದೇಶದ ವಾಹನ ಸಂಶೋಧನೆ ವಿಭಾಗ(ಎಆರ್‍ಎಐ)ದಿಂದ ಅನುಮತಿ ದೊರಕಬೇಕಾಗಿದೆ.  ರಿವೊಲೊ ಸಿಸ್ಟಮ್‍ನಲ್ಲಿ ವಿದ್ಯುತ್ ಮೋಟರೊಂದನ್ನು ಬೆಲ್ಟ್ ಮೂಲಕ ಎಂಜಿನ್ ಕ್ರಾನ್ಸಾಫ್ಟ್ ಮತ್ತು ಬ್ಯಾಟರಿ ಪ್ಯಾಕ್‍ಗೆ ಕನೆಕ್ಟ್ ಮಾಡಲಾಗಿದೆ. ಇದನ್ನು ಮನೆಯಲ್ಲಿರುವ ವಿದ್ಯುತ್ ಪ್ಲಗ್‍ನಲ್ಲಿ ಇತರ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡುವಂತೆ ಚಾರ್ಜ್ ಮಾಡಬಹುದಾಗಿದೆ. ಕಾರು ಚಾಲನೆಯ ಸಂದರ್ಭದಲ್ಲೂ ಇದು ಕೊಂಚ ಚಾರ್ಜ್ ಆಗುತ್ತದೆ. ಎಲೆಕ್ಟ್ರಿಕ್ ಮೋಟರ್‍ನಿಂದಾಗಿ ಪೆಟ್ರೋಲ್/ಡೀಸೆಲ್ ಎಂಜಿನ್‍ನ ಲೋಡ್ ಕೊಂಚ ಕಡಿಮೆಯಾಗುತ್ತದೆ.

ಈ ಬ್ಯಾಟರಿಗಳನ್ನು ಸುಮಾರು 3-4 ಗಂಟೆ ಚಾರ್ಜ್ ಮಾಡಬೇಕಿದೆ. ಬ್ಯಾಟರಿಗಳ ತೂಕ ಸುಮಾರು 95 ಕೆ.ಜಿ ಇರುತ್ತದೆ(ಭವಿಷ್ಯದಲ್ಲಿ ತೂಕ ಕಡಿಮೆಯಾದೀತು). ಬ್ಯಾಟರಿಗಳನ್ನು ಕಾರಿನ ಹಿಂಭಾಗದ ಬೂಟ್ ಸ್ಥಳದಲ್ಲಿ ಇಡಲಾಗುತ್ತದೆ. ಹಿಂದಿನ ಚಕ್ರಕ್ಕೆ ಹೆಚ್ಚು ಲೋಡ್ ಆಗುವುದನ್ನು ತಪ್ಪಿಸಲು ಸ್ಪ್ರಿಂಗ್-ಇನ್-ಸ್ಪ್ರಿಂಗ್ ಪರಿಹಾರವನ್ನು ಕಂಪನಿ ನೀಡಿದೆ. ಇದರಿಂದ ಈ ತೂಕವು ಸಸ್ಪೆನ್ಷನ್ ಮೇಲೆ ಬೀಳುತ್ತದೆ. ಎಲೆಕ್ಟ್ರಿಕ್ ಮೋಟರನ್ನು ಕೆಳಭಾಗದಲ್ಲಿ ಜೋಡಿಸಲಾಗಿದೆ. ಕೇವಲ 48 ವೋಲ್ಟೆಜ್‍ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಬ್ಯಾಟರಿ ಮುಗಿದ ಬಳಿಕ ಇದರಲ್ಲಿರುವ ಬ್ಯಾಟರಿ ನಿರ್ವಹಣೆ ವ್ಯವಸ್ಥೆಯು ಆಫ್ ಆಗಿ ಪೆಟ್ರೋಲ್/ಡೀಸೆಲ್ ಎಂಜಿನ್‍ನಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತದೆ.

ಲಾಭವೇನು?
ಕೆಪಿಐಟಿ ಕ್ಯುಮಿನ್ಸ್‍ನ ರೆವೊಲೊ ಸಿಸ್ಟಮ್ ಅಳವಡಿಸಿದ ಮಾರುತಿ ಆಲ್ಟೊ ಕಾರನ್ನು ಎಆರ್‍ಎಐ ಪರೀಕ್ಷಿಸುತ್ತಿದೆ. ಈ ಕಿಟ್ ಅಳವಡಿಸಿದ ಮಾರುತಿ ಆಲ್ಟೊ ನಗರ ರಸ್ತೆಯಲ್ಲಿ ಶೇಕಡ 35ರಷ್ಟು ಹೆಚ್ಚು ಮೈಲೇಜ್ ನೀಡುತ್ತಿದೆಯಂತೆ. ಇದೇ ಕಿಟ್ ಅಳವಡಿಸಿದ ಟಾಟಾ 407 ಟ್ರಕ್ ಸಹ ಶೇಕಡ 30ರಷ್ಟು ಹೆಚ್ಚು ಮೈಲೇಜ್ ನೀಡಿದೆಯಂತೆ.

ದುಬಾರಿಯಲ್ಲ
ಕಾರ್‍ಟಾಕ್ ಆಟೋ ತಜ್ಞರು ಹೇಳುವ ಪ್ರಕಾರ ಆಲ್ಟೊ ಕಾರಿಗೆ ಎಲೆಕ್ಟ್ರಿಕ್ ಕಿಟ್ ಅಳವಡಿಸಲು ಸುಮಾರು 60ರಿಂದ 80 ಸಾವಿರ ರೂಪಾಯಿ ಅಗತ್ಯವಿದೆ. ನೀವು ಕಾರಿಗೆ ಲೀಥಿಯಂ ಐಯಾನ್ ಬ್ಯಾಟರಿ ಆಯ್ಕೆ ಮಾಡಿಕೊಳ್ಳುವಿರೋ ಅಥವಾ ಆ್ಯಸಿಡ್ ಬ್ಯಾಟರಿ ಪ್ಯಾಕ್ ಅಳವಡಿಸಿಕೊಳ್ಳುವಿರೋ ಎನ್ನುವುದರ ಮೇಲೆ ಇದರ ವೆಚ್ಚ ಹೆಚ್ಚು ಕಮ್ಮಿಯಾಗಲಿದೆ. ರೇವಾದಂತಹ ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ ಇದು ದುಬಾರಿಯೆಂದು ಅನಿಸುವುದಿಲ್ಲ. ತಿಂಗಳಾಂತ್ಯಕ್ಕೆ ಮನೆಯ ವಿದ್ಯುತ್ ಬಿಲ್ ಕೊಂಚ ಹೆಚ್ಚು ಬರಬಹುದು.

ಚಾರ್ಜ್
ಈ ಕಾರನ್ನು ಮನೆಯಲ್ಲಿ ಚಾರ್ಜ್ ಮಾಡುವುದಾದರೆ ಓಕೆ. ಆದರೆ ನಡು ರಸ್ತೆಯಲ್ಲಿ ಚಾರ್ಜ್ ಮುಗಿದರೆ ಏನು ಮಾಡುವುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಮುಂದಿನ ಕೆಲವೇ ತಿಂಗಳಲ್ಲಿ ಮಹೀಂದ್ರ ರೇವಾ ಕಂಪನಿಯು ಹೊಸ ಇ20 ಕಾರನ್ನು ಪರಿಚಯಿಸಲಿದೆ. ಇದರ ಜೊತೆಗೆ ನಗರಗಳಲ್ಲಿ ಸಾಕಷ್ಟು ಚಾರ್ಜಿಂಗ್ ಪಾಯಿಂಟ್‍ಗಳನ್ನು ಅಳವಡಿಸಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಾರ್ಜಿಂಗ್ ಪಾಯಿಂಟ್‍ಗಳ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ. ನೀವಿರುವ ಊರಿನಲ್ಲಿ ಇಂತಹ ಚಾರ್ಜ್ ಸ್ಟೇಷನ್‍ಗಳು ಲಭ್ಯವಿದೆ ಎಂದು ಅರಿವಾದ ತಕ್ಷಣ ನಿಮ್ಮ ಪೆಟ್ರೋಲ್/ಡೀಸಲ್ ಕಾರನ್ನು ಹೈಬ್ರಿಡಾಗಿ ಕನ್‍ವರ್ಟ್ ಮಾಡಿಕೊಳ್ಳಬಹುದು.

ಒಂದು ಊಹೆ
ಇಂತಹ ಕಿಟ್‍ಗಳನ್ನು ನಾವೇ ಸ್ವಂತ ಖರ್ಚಿನಿಂದ ಅಳವಡಿಸಿಕೊಳ್ಳುವುದು ಒಂದು ವಿಧಾನ. ಆದರೆ ಇಂತಹ ಕಿಟ್‍ಗಳನ್ನು ಕಾರು ಕಂಪನಿಗಳೇ ಹೊರತಂದರೆ ಇನ್ನಷ್ಟು ಲಾಭವಾದೀತು. ಉದಾಹರಣೆಗೆ ಮಾರುತಿ ಸುಜುಕಿಯಂತಹ ಕಂಪನಿಯು ಇಂತಹ ಕಿಟ್ ಅಳವಡಿಸಿಯೇ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟರೆ ಒಳ್ಳೆಯದು. ಇಂತಹ ದಿನಗಳು ಬರುವುದಾಗಿ ಊಹಿಸೋಣ.

ಹಾಗಂತ ಇವು ಸಂಪೂರ್ಣ ಪರಿಸರ ಸ್ನೇಹಿ ಕಾರೆಂದು ಹೆಮ್ಮೆ ಪಟ್ಟುಕೊಳ್ಳುವ ಹಾಗಿಲ್ಲ. ಆದರೆ ಮುಗಿದು ಹೋಗುವ ಸಂಪನ್ಮೂಲಗಳನ್ನು ಕೊಂಚ ಪ್ರಮಾಣದಲ್ಲಿ ಕಡಿಮೆ ಬಳಕೆ ಮಾಡುತ್ತಿದ್ದೇವೆ ಎಂಬ ಆತ್ಮತೃಪ್ತಿಯನ್ನು ಇದು ನೀಡಬಹುದು. ಕೆಪಿಐಟಿ ಕ್ಯೂಮಿನ್ಸ್ ಮತ್ತು ಭಾರತ್ ಫೆÇೀರ್ಜ್ ಕಂಪನಿಯ ರಿವೊಲಿ ಪ್ರಾಡಕ್ಟ್ ವಾಹನ ಲೋಕದಲ್ಲಿ ಹೊಸ ರೆವಲ್ಯೂಷನ್ ಮಾಡಬಹುದೇ? ಕಾಲವೇ ಉತ್ತರಿಸಬೇಕು!

No comments