ಟೆಸ್ಟ್ ಡ್ರೈವ್: ಮಹೀಂದ್ರ ಪಂಟೆರೊ

Share:
ಮಹೀಂದ್ರ ದ್ವಿಚಕ್ರವಾಹನ ಫ್ಯಾಕ್ಟರಿಯಿಂದ ಪಂಟೆರೊ ಹೆಸರಿನ 110 ಸಿಸಿಯ 125 ಕೆ.ಜಿ. ತೂಕದ ಬೈಕೊಂದು ಆಗಮಿಸಿದೆ. ಹಳೆಯ ಸ್ಟಾಲಿಯೊ ಬೈಕಿನ ಹೊಸ ಅವತಾರವಾದ ಪಂಟೆರೊ ಟೆಸ್ಟ್ ರೈಡ್ ರಿಪೋರ್ಟ್ ಕಾರ್ಡ್ ಇಲ್ಲಿದೆ.


ಅನುಭವಗಳೇ ಪಾಠ ಕಲಿಸುತ್ತವೆ ಎಂಬ ಮಾತು ಮಹೀಂದ್ರ ಟು-ವೀಲರ್ ಕಂಪನಿಗೆ ಸೂಕ್ತವಾಗಿ ಹೊಂದುತ್ತದೆ. ಕೆಲವು ವರ್ಷದ ಹಿಂದೆ ಕಂಪನಿಯು ಪರಿಚಯಿಸಿದ ಮೊಜೊ ಮತ್ತು ಸ್ಟಾಲಿಯೊ ಬೈಕ್‍ಗಳು ಅವುಗಳ ತಾಂತ್ರಿಕ ಸಮಸ್ಯೆಗಳಿಂದ ಸಾಕಷ್ಟು ಟೀಕೆಗೀಡಾಗಿದ್ದವು.
ಕಂಪನಿಯು ತನ್ನ ಪುಣೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ 100 ಕೋಟಿ ಇನ್‍ವೆಸ್ಟ್ ಮಾಡಿ ಈ ಎರಡು ಬೈಕ್‍ಗಳನ್ನು ಸಾಕಷ್ಟು ಅಪ್‍ಡೇಟ್ ಮಾಡಿ ಪಂಟೆರೊ ಮತ್ತು ಸೆಂಟುರೊ ಹೆಸರಿನಲ್ಲಿ ಮಾರುಕಟ್ಟೆಗೆ ಬಿಟ್ಟಿದೆ. ಅದರಲ್ಲಿ ನಾನು ಟೆಸ್ಟ್ ರೈಡ್ ಮಾಡಿದ್ದು ಪಂಟೆರೊ ಬೈಕನ್ನು. ಕಮ್ಯೂಟರ್ ಸೆಗ್ಮೆಂಟಿನಲ್ಲಿ ಇತರ ಬೈಕ್‍ಗಳಿಗೆ ಸಮರ್ಥ ಪೈಪೋಟಿ ನೀಡುವ ಲುಕ್ ಇದಕ್ಕಿದೆ. ಸ್ಪ್ಲೆಂಡರ್ ಪ್ಲಸ್, ಡಿಸ್ಕವರ್ ಮತ್ತು ಹೋಂಡಾ ಡ್ರೀಮ್ ಯುಗ ಇದಕ್ಕೆ ಪ್ರಮುಖ ಸ್ಪರ್ಧಿಗಳು.

ಪಂಟೆರೊ ಸ್ಟೈಲ್
ಬಹುಶಃ ನಮ್ಮ ವಾಹನ ವಿನ್ಯಾಸಕರೆಲ್ಲ ಪ್ರತಿ ಭಾನುವಾರ ಅಪರಾಹ್ನ ಅನಿಮಲ್ ಪ್ಲಾನೆಟ್ ನೋಡುತ್ತಾರೆ. ಯಾಕೆಂದರೆ ಅವರ ವಾಹನ ವಿನ್ಯಾಸವೆಲ್ಲ ಪ್ರಾಣಿಗಳಿಂದ ಸ್ಪೂರ್ತಿ ಪಡೆದಿದೆ. ಚಿರತೆ, ಹುಲಿ, ಕೋಣದ ವಿನ್ಯಾಸದ ವಾಹನಗಳೆಲ್ಲ ಹೀಗೆಯೇ ಮೂಡಿ ಬಂದಿರಬಹುದು. ಪಂಟೆರೊ ಲುಕ್‍ನಲ್ಲೂ ಇಂತಹ ಅಗ್ರೆಸಿವ್ ಲುಕ್ ಇದೆ. 

ನೇರವಾದ ಫ್ರೇಮಿನಲ್ಲಿ ಅಚ್ಚುಕಟ್ಟಾಗಿರುವ ಕಪ್ಪು ಎಂಜಿನ್ ಗಮನ ಸೆಳೆಯುತ್ತದೆ. ಜೊತೆಗೆ ಇದರ ಸಂಪೂರ್ಣ ಡಿಜಿಟಲ್ ಡಿಸ್‍ಪ್ಲೇ ಇಷ್ಟವಾಗುತ್ತದೆ. ಆದರೆ ಹೈ ಬೀಮ್, ಡೈರೆಕ್ಷನ್ ಇಂಡಿಕೇಟರ್‍ಗಳನ್ನು ಆನ್ ಮಾಡುವ ಸ್ವಿಚ್‍ಗಳ ಸಣ್ಣ ಸಕ್ರ್ಯುಲರ್ ಡಯಲ್ ಅಡ್ಜೆಸ್ಟ್‍ಮೆಂಟ್‍ಗಳು ತುಂಬಾ ಚಿಕ್ಕದಾಗಿದ್ದು, ಸವಾರನಿಗೆ ಸುಲಭವಾಗಿ ಅಪರೇಟ್ ಮಾಡಲು ಪೂರಕವಾಗಿಲ್ಲ. ಮುಂಭಾಗದ ಹೆಡ್‍ಲ್ಯಾಂಪ್‍ನ ಅಸಾಂಪ್ರದಾಯಕ ವಿನ್ಯಾಸದಿಂದಾಗಿ ಪೈಲಟ್ ಲ್ಯಾಂಪ್‍ಗಳಿಗೆ ಹೆಚ್ಚಿನ ಸ್ಥಳಾವಕಾಶ ದೊರಕಿದೆ. ಹೆಡ್‍ಲ್ಯಾಂಪ್ ಸಾಕಷ್ಟು ವಿಶಾಲವಾಗಿ ಬೆಳಕು ಬೀರುವ ಬೀಮ್ ಹೊಂದಿದೆ. ಹಿಂಬದಿಯ ಮಿಣುಕು ದೀಪಗಳಲ್ಲಿ ಡಬಲ್ ಡೆಕ್ ಎಲ್‍ಇಡಿ ಲೇಔಟ್ ಹೊಂದಿದ್ದು, ಬೈಕಿನ ಹಿಂಭಾಗದ ಸೌಂದರ್ಯವನ್ನು ಹೆಚ್ಚಿಸಿದೆ.

ಬುದ್ಧಿವಂತ ದಕ್ಷತಶಾಸ್ತ್ರ ಮತ್ತು ಹಗುರವಾದ ವಾಸ್ತುಶಿಲ್ಪ ಕಾರಣದಿಂದ ಪಂಟೆರೊ ಬೈಕ್ ದಿನಂಪ್ರತಿ ಸವಾರಿಗೆ ಸೂಕ್ತವಾಗುವಂತೆ ಇದೆ. ಸಣ್ಣದಾದ ಟ್ಯಾಂಕ್ ಮತ್ತು ಅದಕ್ಕಿಂತ ಕಡಿಮೆ ಎತ್ತರದಲ್ಲಿ ಜೋಡಿಸಿರುವ 774 ಮೀ.ಮೀ. ಗಾತ್ರದ ಚಪ್ಪಟೆ ಸೀಟ್ ಇದೆ. ಹಿಂಬದಿ ಸವಾರನ ಸೀಟು ಕೊಂಚ ಎತ್ತರಕ್ಕಿದ್ದು ಸಾಧಾರಣ ಕಂಫರ್ಟ್ ನಿರೀಕ್ಷಿಸಬಹುದು. ಸಮರ್ಥವಾಗಿ ಜೋಡಿಸಿರುವ ಹ್ಯಾಂಡಲ್‍ಬಾರ್ ಮತ್ತು ಕಾಲಿಡುವ ಫೂಟ್ ಫೆಗ್ಸ್‍ಗಳಿಂದಾಗಿ ರೈಡರ್ ದೂರದ ಸ್ಥಳಗಳಿಗೂ ಹೆಚ್ಚು ತ್ರಾಸವಿಲ್ಲದೆ ಪ್ರಯಾಣ ಬೆಳೆಸಬಹುದು.

ಪವರ್
ಪವರ್ ಕಡಿಮೆ ಎಂದೆನಿಸಿದರೂ ಆರಂಭಿಕ ಬೈಕ್ ಖರೀದಿದಾರರಿಗೆ ಇಷ್ಟವಾಗುವಂತೆ ಅಗ್ಗದ ಮತ್ತು ಒಟ್ಟಾರೆ ತೃಪ್ತಿದಾಯಕವೆನಿಸುವ ಬೈಕಿದು. ನೂತನ ಪಂಟೆರೊ ಬೈಕ್ 110ಸಿಸಿಯ ಎಂಸಿಐ- ಎಂಜಿನ್ ಹೊಂದಿದೆ. ಎಂಸಿಐ ವಿಸ್ತೃತ ರೂಪ ಮೈಕ್ರೊ ಚಿಪ್ ಇಗ್ನೈಟೆಡ್. ಈ ಎಂಜಿನ್ 7,500 ಆವರ್ತನಕ್ಕೆ 8.6 ಪಿಎಸ್ ಪವರ್ ನೀಡುತ್ತದೆ. ಇದು ಮಹೀಂದ್ರ ಕಂಪನಿಯು ಸ್ವಂತವಾಗಿ ಅಭಿವೃದ್ಧಿಪಡಿಸಿದ ಎಂಜಿನ್. ಆದರೆ ಉಳಿದ ಬೈಕ್‍ಗಳ ಎಂಜಿನ್‍ಗಳಿಗೆ ಹೋಲಿಸಿದರೆ ಕಡಿಮೆ ಪವರ್ ಡೆಲಿವರಿ ಮತ್ತು ರಿಫೈನ್‍ಮೆಂಟ್ ಕೊರತೆ ಇರುವುದು ಅರಿವಾಗುತ್ತದೆ. ಇದರಲ್ಲಿ ಸೊನ್ನೆಯಿಂದ 80 ಕಿ.ಮೀ. ವೇಗ ಪಡೆಯಲು ಸುಮಾರು 13.83 ಸೆಕೆಂಡ್ ಬೇಕಾಯಿತು. ಟೆಸ್ಟ್ ಮಾಡುತ್ತಿದ್ದಾಗ ಪಂಟೆರೊ ಬೈಕಿನ ಡಿಜಿಟಲ್ ಸ್ಪೀಡೊ ಮೀಟರ್‍ನಲ್ಲಿ ನಾವು ಹೋಗುತ್ತಿದ್ದ ವೇಗಕ್ಕಿಂತ ವೇಗ ತಪ್ಪಾಗಿ ಗೋಚರಿಸುತ್ತಿತ್ತು. ಆದರೆ ನಾವು ಸುಮಾರು ಪ್ರತಿಗಂಟೆಗೆ 91 ಕಿ.ಮೀ.ಗೆ ತಲುಪಿದಾಗ ಇಂತಹ ಯಾವುದೇ ತಪ್ಪುಗಳು ಗೋಚರಿಸಲಿಲ್ಲ. ಕಂಪನಿ ಹೇಳಿದಷ್ಟೇ ಮೈಲೇಜ್ ಟೆಸ್ಟ್ ರೈಡ್‍ನಲ್ಲಿ ದೊರಕಿದೆ. ಟ್ಯಾಂಕ್‍ನಲ್ಲಿ 10 ಲೀಟರ್ ತುಂಬಿಸಿದರೆ ಸುಮಾರು 682.5 ಕಿ.ಮೀ. ದೂರ ಹೋಗಬಹುದು. ಅಂದರೆ ಇದರ ಮೈಲೇಜ್ ಪ್ರತಿಲೀಟರ್‍ಗೆ ಸುಮಾರು 68.25 ಕಿ.ಮೀ. ಸಿಟಿ ರಸ್ತೆಯಲ್ಲಿಯಾದರೆ ಪ್ರತಿಲೀಟರಿಗೆ ಸುಮಾರು 64 ಕಿ.ಮೀ. ಮೈಲೇಜ್ ದೊರಕಿದೆ.

ಬ್ರೇಕ್
ಎಲ್ಲಾದರೂ ಈ ಬೈಕಿನಲ್ಲಿ ಅತಿವೇಗದಲ್ಲಿ ಸಾಗುತ್ತಿರುವಾಗ ತುರ್ತಾಗಿ ಬ್ರೇಕ್ ಹಾಕಬೇಕಾದಾಗ ಕೊಂಚ ಸಮಸ್ಯೆ ಉಂಟಾದೀತು. ಅಂದರೆ ಪಂಟೆರೊ 130 ಎಂಎಂ ಡ್ರಮ್ ಬ್ರೇಕ್ ಹೊಂದಿದ್ದು, ಬೈಕ್ ಸಂಪೂರ್ಣವಾಗಿ ಸ್ಟಾಪ್ ಆಗಲು ಸುಮಾರು 4.54 ಸೆಕೆಂಡ್ ಬೇಕಾಗುತ್ತದೆ. ಸುಮಾರು 60 ಕಿ.ಮೀ. ವೇಗದಲ್ಲಿ ಸಾಗುವಾಗಲೂ ಬ್ರೇಕ್ ಹಿಡಿಯಲು ಸುಮಾರು 3 ಸೆಕೆಂಡ್ ಬೇಕಾಯಿತು. ಈ ಬೈಕಿನಲ್ಲಿ ಸುಮಾರು 70 ಕಿ.ಮೀ. ಆಸುಪಾಸಿನಲ್ಲಿ ಹೋಗುವುದು ಒಳ್ಳೆಯದು ಎನ್ನುವುದು ನಮ್ಮ ಉಚಿತ ಸಲಹೆ. ಅದಕ್ಕಿಂತ ವೇಗವಾಗಿ ಸಾಗಿದಾಗ ಒಮ್ಮೆಲೆ ಬ್ರೇಕ್ ಹಾಕಿದಾಗ ಪಜೀತಿಯಾದೀತು.

ಬದಲಾವಣೆಗಳು
ಆದರೂ ಹಳೆಯ ಸ್ಟಾಲಿಯೊಗೆ ಹೋಲಿಸಿದರೆ ಇದರಲ್ಲಿ ಅಮೂಲಾಗ್ರ ಬದಲಾವಣೆಗಳಿವೆ. ಇದರಲ್ಲಿ ನೂತನ ಡಬಲ್ ಕ್ರಡೆಲ್ ಫ್ರೇಮ್ ಇದ್ದು, ಬೈಕಿನ ತೂಕವನ್ನು 1.87 ಕೆ.ಜಿಯಷ್ಟು ಹಗುರವಾಗಿಸಿದೆ. ಇದು ಸವಾರನ ಕಾನ್ಫಿಡೆನ್ಸ್ ಕೊಂಚ ಹೆಚ್ಚಿಸುತ್ತದೆ. ಈ ಬೈಕಿನ ಟೆಲಿಸ್ಕೋಪಿಕ್ ಸಸ್ಪೆನ್ಷನ್‍ನ ಸ್ಪ್ರಿಂಗ್ ಹೊಂದಾಣಿಕೆಯಿಂದಾಗಿ ಅವಳಿ ಷಾಕ್‍ಅಬ್ಸರ್ಬರ್ಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಮೀಣ ಏರುತಗ್ಗುಗಳ ರಸ್ತೆಯಲ್ಲೂ ಅತ್ಯುತ್ತಮವಾಗಿ ಸಾಗಲು ಅನುವಾಗುವಂತೆ ಇದರ ಸೀಟು ಎತ್ತರ ಮತ್ತು ಹ್ಯಾಂಡಲ್‍ಬಾರ್ ಇದೆ.

ಇದರಲ್ಲಿರುವ ಎಂಆರ್‍ಎಫ್ ನೈಲೊಗ್ರಿಪ್ ಟೈರ್ಸ್ ಮತ್ತು 18 ಇಂಚಿನ 5 ಸ್ಪೋಕ್ ಅಲಾಯ್ ವೀಲ್‍ಗಳಿಂದ ಬೈಕಿನ ಗ್ರಿಪ್ ಮಟ್ಟ ಅತ್ಯುತ್ತಮವಾಗಿದೆ. ಇದರಿಂದ ಬೈಕಿನ ಹ್ಯಾಂಡ್ಲಿಂಗ್ ಡೈನಾಮಿಕ್ಸ್ ಸಹ ಅತ್ಯಾಕರ್ಷಕವಾಗಿದೆ.

ಇದರ ನಾಲ್ಕು ಸ್ಪೀಡ್ ಗಿಯರ್‍ಬಾಕ್ಸ್ ಸಿಂಪಲ್ ಆಗಿದೆ. ಆದರೆ ತುಂಬಾ ಸ್ಮೂತ್ ಇಲ್ಲ. ಈ ಬೈಕನ್ನು ಮತ್ತೆ ನ್ಯೂಟ್ರಲ್ ಗಿಯರ್‍ಗೆ ತರಲು ಕೊಂಚ ಹಾರ್ಡ್ ಆಗಿ ಗಿಯರ್ ಶಿಫ್ಟ್ ಮಾಡಬೇಕಾಗುತ್ತದೆ.

ಫೈನಲ್ ವರ್ಡಿಕ್ಟ್
ಈ ಬೈಕಿನ ಕೆಲವೊಂದು ಅವಗುಣಗಳನ್ನು ನೋಡಿ ಬೇಸರವಾಗಿರಬಹುದು. ಇಷ್ಟು ಕಡಿಮೆ ದರಕ್ಕೆ ಇದಕ್ಕಿಂತ ಹೆಚ್ಚು ಬಯಸುವುದು ಕಷ್ಟವಾದೀತು. ಇದರ ಎಕ್ಸ್‍ಶೋರೂಂ ದರ 47 ಸಾವಿರ ರೂಪಾಯಿ. ಆನ್‍ರೋಡ್ ದರ 54 ಸಾವಿರ ರೂಪಾಯಿ. ರಿಫೈನ್‍ಮೆಂಟ್ ಮತ್ತು ಟೆಕ್ನಾಲಜಿ ಪರಿಷ್ಕರಣೆ ವಿಷಯದಲ್ಲಿ ಮಹೀಂದ್ರ ಇನ್ನಷ್ಟು ಸುಧಾರಿಸಬೇಕಿದೆ. ಆದರೆ ಸದ್ಯಕ್ಕೆ ಈ ಬೈಕ್‍ನ ಉತ್ತಮ ಇಂಧನ ದಕ್ಷತೆ ಮತ್ತು ಚಂದದ ವಿನ್ಯಾಸಕ್ಕೆ ತೃಪ್ತಿಪಟ್ಟುಕೊಳ್ಳಬಹುದು.

ಪಂಟೆರೊ ವಿಶೇಷತೆಗಳು
ಎಂಜಿನ್: 4 ಸ್ಟ್ರೋಕ್, ಏರ್‍ಕೂಲ್ಡ್ ಎಸ್‍ಐ
ಡಿಸ್‍ಪ್ಲೇಸ್‍ಮೆಂಟ್: 106.7 ಸಿಸಿ
ಪವರ್: 7500 ಆವರ್ತನಕ್ಕೆ 7 ಹಾರ್ಸ್‍ಪವರ್
ಟಾರ್ಕ್: 5,500 ಆವರ್ತನಕ್ಕೆ 8ಎನ್‍ಎಂ
ಸ್ಟಾರ್ಟ್: ಎಲೆಕ್ಟ್ರಿಕ್ ಸ್ಟಾರ್ಟ್ ಮತ್ತು ಕಿಕ್ ಸ್ಟಾರ್ಟ್
ಗಿಯರ್: ನಾಲ್ಕು ಸ್ಪೀಡ್
ಕ್ಲಚ್: ವೆಟ್ ಮಲ್ಟಿ ಪ್ಲೇಟ್
ಬ್ರೇಕ್: ಡ್ರಮ್ ಬ್ರೇಕ್
ಸ್ಪೀಡೊ ಮೀಟರ್: ಡಿಜಿಟಲ್/ಅನಲಾಗ್
ವೀಲ್ಸ್: ಅಲಾಯ್
ತೂಕ: 125 ಕೆ.ಜಿ.

 ಪಂಟೆರೊ ವೆಬ್ ಸೈಟ್

No comments