ಫೋರ್ಡ್ ಫ್ಯಾಕ್ಟರಿಯಿಂದ ಹೊಸ ಫಿಗೊ ಆವೃತ್ತಿ ರಸ್ತೆಗಿಳಿದಿದೆ. ಸ್ಪೋರ್ಟಿ ಲುಕ್ ನೀಡುವ ನೂತನ ಕೈನಟಿಕ್ ವಿನ್ಯಾಸ, ಕಡು ಹಳದಿ, ನೀಲಿ ಬಣ್ಣಗಳಲ್ಲಿ ಆಗಮಿಸಿರುವ ನೂತನ ಫಿಗೊ ಕಾರು ಹೇಗಿದೆ?
![]() |
ಚಿತ್ರಕೃಪೆ: internet |
ಒಂದೆರಡು ವರ್ಷದ ಹಿಂದೆ ಯಾರಲ್ಲಿಯಾದರೂ ಒಂದು ಒಳ್ಳೆಯ ಸಣ್ಣಕಾರು ಸೂಚಿಸಿ ಎಂದರೆ ತಡವರಿಸದೇ ಫೋರ್ಡ್ ಫಿಗೊ ತಗೊ ಅಂತಿದ್ದರು.
2010ರಲ್ಲಿ ವರ್ಷದ ಬೆಸ್ಟ್ ಕಾರು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಫಿಗೊ ಪಡೆದಿತ್ತು. ಆದರೆ ಈಗ ಫಿಗೊ ಸಣ್ಣಕಾರು ಖರೀದಿದಾರರ ಹಾಟ್‍ಫೇವರಿಟ್ ಆಗಿ ಉಳಿದಿಲ್ಲ. ಹಲವು ಪ್ರತಿಸ್ಫರ್ಧಿ ಕಾರುಗಳ ಆಗಮನ ಫಿಗೊ ಮಾರಾಟಕ್ಕೆ ಹಿನ್ನಡೆ ತಂದಿದೆ.
ಪರಂತೂ, ಫಿಗೊ ಆಟ ಮುಗಿಯಿತು ಎಂದು ಎಲ್ಲರೂ ಭಾವಿಸುತ್ತಿರುವಾಗಲೇ ಫೋರ್ಡ್ ಕಂಪನಿಯು ಹೊಸ ಫಿಗೊ ಕಾರನ್ನು ಪರಿಚಯಿಸಿದೆ.
ಹೊರ ವಿನ್ಯಾಸ
ಕಡು ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಹೊಸ ಫಿಗೊ ಕಾರು ರಸ್ತೆಗಿಳಿದಿದೆ. ಹಲವು ಫೀಚರುಗಳೊಂದಿಗೆ (ಕಂಪನಿ ಪ್ರಕಾರ ನೂರಕ್ಕೂ ಹೆಚ್ಚು)ಆಗಮಿಸಿರುವ ಫಿಗೊ ಕಾರಿನಲ್ಲಿ ಷಡ್ಬುಜ ಆಕಾರದ ಗ್ರಿಲ್ ಮತ್ತು ಮರುವಿನ್ಯಾಸ ಮಾಡಿರುವ ಆಕರ್ಷಕ ಹೆಡ್‍ಲ್ಯಾಂಪ್ ಗಮನಸೆಳೆಯುತ್ತದೆ. ಹೆಡ್‍ಲ್ಯಾಂಪ್ ರಿಫ್ಲೆಕ್ಟಿವ್ ಪದರ ವಿಸ್ತಾರವಾಗಿದ್ದು, ಬೆಳಕಿನ ಪ್ರಖರತೆ ಮತ್ತು ವಿಶಾಲತೆ ಹೆಚ್ಚಾಗಿದೆ. ಕತ್ತಲಲ್ಲಿ ಹೆಚ್ಚು ಪವರ್‍ಫುಲ್ ಆಗಲು ಮಿಣುಕು ದೀಪ ಅರ್ಥಾತ್ ಫಾಗ್ ಲೈಟ್ಸ್‍ಗೆ ಹೊಸ ಬೆಝಲ್ಸ್ ಇದೆ. ಚಕ್ರದತ್ತ ದೃಷ್ಟಿ ಹರಿಸಿದರೆ 14 ಇಂಚಿನ ಹೊಸ ಅಲಾಯ್ ವೀಲ್‍ಗಳು ಗಮನ ಸೆಳೆಯುತ್ತವೆ. ಹಿಂಬದಿ ಲ್ಯಾಂಪ್ ಬದಲಾಗದಿದ್ದರೂ, ಕೊಂಚ ಪರಿಷ್ಕೃತವಾಗಿದೆ.
ಕಾರಿನೊಳಗೆ
ನೂತನ ಫಿಗೊ ಕಾರಿನೊಳಗೆ ಪ್ರವೇಶಿಸಿದಾಗ ಹೊಸ ಮಾರ್ಪಾಡುಗಳು ಗಮನ ಸೆಳೆಯುತ್ತವೆ. ಡೋರ್ ಒಳಭಾಗದ ವಿನ್ಯಾಸವೂ ಬದಲಾಗಿದೆ. ಕೆಲವು ಬಟನ್‍ಗಳು ಹೆಚ್ಚಾಗಿವೆ. ನೂತನ ಫ್ಯಾಬ್ರಿಕ್ ವಿನ್ಯಾಸದಿಂದ ಇಂಟಿರಿಯರ್ ಆಕರ್ಷಕತೆ ಹೆಚ್ಚಾಗಿದೆ. ಆದರೆ, ಡ್ಯಾಷ್‍ಬೋರ್ಡ್ ವಿನ್ಯಾಸದಲ್ಲಿ ಮಹತ್ವದ ಬದಲಾವಣೆಗಳು ಇಲ್ಲ. ಸ್ಟಿಯರಿಂಗ್ ವೀಲ್‍ನಲ್ಲಿರುವ ನಿಯಂತ್ರಕಗಳು ಫಿಯೆಸ್ಟಾ ಕಾರನ್ನು ನೆನಪಿಸುತ್ತದೆ. ಅಂದರೆ ಸ್ಟಿಯರಿಂಗ್ ವೀಲ್‍ನ ಕೊಂಚ ಹಿಂಭಾಗದಲ್ಲಿ ಕಂಟ್ರೋಲ್‍ಗಳನ್ನು ಜೋಡಿಸಲಾಗಿದೆ.
ಫೋರ್ಡ್ ಫಿಗೊ ಸ್ಥಳಾವಕಾಶದ ಕುರಿತು ಯಾವುದೇ ದೂರುಗಳಿಲ್ಲ. ಹೊಸ ಫಿಗೊ ಕಾರಿನಲ್ಲಿ ಆರಾಮದಾಯಕತೆ ಮತ್ತು ಅಂದ ಹೆಚ್ಚಿಸಲು ಕಂಪನಿಯು ಸಾಕಷ್ಟು ಪ್ರಯತ್ನಿಸಿದಂತಿದೆ. ಮುಂಭಾಗದ ಸೀಟ್‍ಗಳಲ್ಲಿ ಆರಾಮವಾಗಿ ತಲೆಯಿಟ್ಟು ಸುಖಕರ ಪ್ರಯಾಣ ಮಾಡಲು ಸೂಕ್ತವಾಗುವಂತೆ ಹೊಸ ಹೆಡ್‍ರೆಸ್ಟ್ ಅಳವಡಿಸಲಾಗಿದೆ. ಬೆನ್ನಿನ ಕೆಲಭಾಗಕ್ಕೆ ಬೆಂಬಲ ನೀಡುವ(ಲಂಬರ್ ಸಪೋರ್ಟ್) ಫೀಚರ್ ಸಹ ಪರಿಷ್ಕೃತವಾಗಿದೆ. ಸೀಟ್ ನಿಲುವು ಅತ್ಯುತ್ತಮವಾಗಿದ್ದು, ಡ್ರೈವಿಂಗ್ ಮಾಡುವಾಗ ರಸ್ತೆ ಸರಿಯಾಗಿ ಕಾಣುತ್ತದೆ. ಕಾರು ಚಾಲನೆ ಮಾಡುವ ಆರಂಭಿಕರಿಗೆ ಇದು ಸೂಕ್ತವಾಗಿದೆ.
ಫಿಗೊ ಡ್ರೈವಿಂಗ್
ಅಭಿಷೇಕ್ ನಿಗಮ್ ಈ ಕಾರನ್ನು ಮುಂಬೈನಲ್ಲಿ ರಾತ್ರಿ ವೇಳೆಯಲ್ಲಿ ಡ್ರೈವಿಂಗ್ ಮಾಡಿದ್ದರು. ರಾತ್ರಿಯ ಖಾಲಿ ರಸ್ತೆಯಲ್ಲಿ ನಿರಾಳವಾಗಿ ಡ್ರೈವ್ ಮಾಡಲು ಅವರು ಈ ಹೊತ್ತನ್ನು ಆಯ್ಕೆ ಮಾಡಿಕೊಂಡರಂತೆ. ಹೊಸ ಫಿಗೊ ಫಸ್ಟ್ ಡ್ರೈವ್ ಅನುಭವವನ್ನು ಅವರ ಮಾತಲ್ಲೇ ಕೇಳೋಣ. `ಮೊದಲಿಗೆ ಪೆಟ್ರೋಲ್ ಫಿಗೊ ಡ್ರೈವ್ ಮಾಡಿದೆ. ಎಂಜಿನ್ ಕೊಂಚ ಪರಿಷ್ಕೃತವಾಗಿದೆ ಎಂದೆನಿಸಿತು. ಆರಂಭಿಕ ಪಿಕ್‍ಅಪ್ ಸಾಮರ್ಥ್ಯವನ್ನು ಹೆಚ್ಚು ಮಾಡಿರುವುದಾಗಿ ಖುದ್ದಾಗಿ ಫೋರ್ಡ್ ಹೇಳಿತ್ತು. ಆದರೂ, ಪೆಟ್ರೋಲ್ ಆವೃತ್ತಿ ಈಗಲೂ ಕೊಂಚ ಸೋಮಾರಿ ಅಥವಾ ಜಡತ್ವದಿಂದ ವರ್ತಿಸುವಂತೆ ಭಾಸವಾಯಿತು. ಡೀಸೆಲ್ ಆವೃತ್ತಿಯು ಹೆಚ್ಚು ಬೆಟರ್ ಎಂಬ ಫೀಲ್ ನೀಡಿದೆ. ಆರಂಭಿಕ ಆಕ್ಸಿಲರೇಷನ್ ಉತ್ತಮವಾಗಿದೆ. ದೂರಪ್ರಯಾಣದಲ್ಲೂ ಉತ್ತಮ ಡ್ರೈವಿಂಗ್ ಅನುಭವ ನೀಡುತ್ತದೆ. ದಕ್ಷತೆ ಮತ್ತು ಕಾರ್ಯಕ್ಷಮತೆಯಲ್ಲಿ ಪೆಟ್ರೋಲ್ ಆವೃತ್ತಿಗಿಂತ ಡೀಸೆಲ್ ಆವೃತ್ತಿ ಹೆಚ್ಚು ಲೈಕ್ ಆಯ್ತು' ಎನ್ನುತ್ತಾರೆ.
ತಗೋಬಹುದಾ?
ಸಣ್ಣಕಾರು ಸಮೂಹದಲ್ಲಿ ಫೋರ್ಡ್ ಫಿಗೊ ಖಂಡಿತವಾಗಿಯೂ ಒಳ್ಳೆಯ ಆಯ್ಕೆ. ಹೊಸ ಫಿಗೊ ಕಾರಿನಲ್ಲಿ ಅಳವಡಿಸಿರುವ ಹೊಸ ಫೀಚರುಗಳು ಆರಾಮದಾಯಕತೆ ಮತ್ತು ಚಾಲನೆ ಅನುಭವವನ್ನು ಹೆಚ್ಚಿಸುತ್ತದೆ. ಹೆದ್ದಾರಿ ಮತ್ತು ಸಿಟಿ ರಸ್ತೆಯಲ್ಲಿ ಸವಾರಿಗೆ ಹೊಸ ಫಿಗೊ ಸೂಕ್ತವಾಗಿದೆ. ಹೊಸ ಫಿಗೊ ಬೇಸ್ ಆವೃತ್ತಿ ದರ 3.85 ಲಕ್ಷ. ಟಾಪ್ ಎಂಡ್ ಟೈಟಾನಿಯಂ ಡೀಸೆಲ್ ಆವೃತ್ತಿ ದರ 6 ಲಕ್ಷದವರೆಗಿದೆ. ಕುಟುಂಬ ಸವಾರಿಗೆ ಸೂಕ್ತ ಕಾರು ಹುಡುಕಾಡುವರೊಮ್ಮೆ ಹೊಸ ಫಿಗೊ ಟೆಸ್ಟ್ ಡ್ರೈವ್ ಮಾಡಿ ನೋಡಬಹುದು.
ಕೆಲವು ಹೊಸತುಗಳು
ಹೊಸ ಹೆಡ್‍ಲ್ಯಾಂಪ್
ಮುಂಭಾಗದ ನೂತನ ಬಂಪರ್
ಹೊಸ ಟೇಲ್ ಲ್ಯಾಂಪ್
ಹೊಸ ಇಂಟಿರಿಯರ್ ವಿನ್ಯಾಸ
ಬ್ಲೂಟೂತ್ ಕನೆಕ್ಟಿವಿಟಿ
ಸ್ಟಿಯರಿಂಗ್‍ನಲ್ಲಿ ಹೊಸ ಆಡಿಯೋ ಕಂಟ್ರೋಲ್
ಆವೃತ್ತಿ ಎಕ್ಸ್ ಶೋರೂಂ ದರ
ಪೆಟ್ರೋಲ್ ಎಲ್‍ಎಕ್ಸ್‍ಐ3.84 ಲಕ್ಷ
ಪೆಟ್ರೋಲ್ ಇಎಕ್ಸ್‍ಐ4.22 ಲಕ್ಷ
ಪೆಟ್ರೋಲ್ ಝಡ್‍ಎಕ್ಸ್‍ಐ4.52 ಲಕ್ಷ
ಪೆಟ್ರೋಲ್ ಟೈಟಾನಿಯಂ: 5.01 ಲಕ್ಷ
ಡೀಸೆಲ್ ಎಲ್‍ಎಕ್ಸ್‍ಐ4.81 ಲಕ್ಷ
ಡೀಸೆಲ್ ಇಎಕ್ಸ್‍ಐ5.20 ಲಕ್ಷ
ಡೀಸೆಲ್ ಝಡ್‍ಎಕ್ಸ್‍ಐ5.50 ಲಕ್ಷ
ಡೀಸೆಲ್ ಟೈಟಾನಿಯಂ 5.99 ಲಕ್ಷ
ವೆಬ್ ಸೈಟ್: ಫೋರ್ಡ್ ಫಿಗೊ
No comments