ಮಾರುತಿ ಆಲ್ಟೊ 800 v/s ಹುಂಡೈ ಇಯಾನ್

Share:
ಆಲ್ಟೊ 800 ಮತ್ತು ಹ್ಯುಂಡೈ ಇಯಾನ್ ಸಣ್ಣಕಾರುಗಳನ್ನು ಅಕ್ಕಪಕ್ಕ ನಿಲ್ಲಿಸಿದಾಗ ಖರೀದಿದಾರರು ಒಮ್ಮೆ ತಬ್ಬಿಬ್ಬಾಗಬಹುದು. ಸುಂದರ ವಿನ್ಯಾಸದ, ಪ್ರೀಮಿಯಂ ಲುಕ್‍ನ ಇಯಾನ್ ಮತ್ತು ಜನಪ್ರಿಯ ಆಲ್ಟೊ ಕಾರಿನ ಹೊಸ ಆವೃತ್ತಿಗಳೆರಡರಲ್ಲಿ ಯಾವುದನ್ನು ಖರೀದಿಸಬಹುದು?
ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಿತ


ಎಂಟ್ರಿ ಲೆವೆಲ್ ಸಣ್ಣಕಾರು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಗೊಂದಲವಾಗುವಂತೆ ಹಲವು ಕಾರುಗಳಿವೆ. ಅದರಲ್ಲಿ ಇತ್ತೀಚೆಗೆ ಆಗಮಿಸಿದ ಆಲ್ಟೊ 800 ಹೊಸ ಆಕರ್ಷಣೆ. ಜೊತೆಗೆ ಹುಂಡೈ ಕಂಪನಿಯ ಪ್ರೀಮಿಯಂ ಲುಕ್‍ನ ಇಯಾನ್ ಕೂಡ ಗ್ರಾಹಕರನ್ನು ಆಕರ್ಷಿಸುತ್ತದೆ.
ಇವೆರಡು ಕಾರುಗಳಲ್ಲಿ ಯಾವೆಲ್ಲ ಸಾಮ್ಯತೆ, ಭಿನ್ನತೆಗಳಿವೆ?

ಹೊಸ ವಿನ್ಯಾಸದ ಬಾನೆಟ್ ಮತ್ತು ಹೂವಿನ ಎಸಳಿನಂತೆ ಕಾಣುವ ಹೆಡ್‍ಲ್ಯಾಂಪ್ ಇತ್ಯಾದಿಗಳಿಂದ ಹೊಸ ಆಲ್ಟೊ ಅಂದವಾಗಿ ಕಾಣುತ್ತದೆ. ಆದರೆ ಹುಂಡೈನ ಜನಪ್ರಿಯ ಫ್ಲೂಡಿಕ್ ವಿನ್ಯಾಸವಿರುವ ಇಯಾನ್ ಮುಂದೆ ಆಲ್ಟೊ ಕೊಂಚ ಮಂಕಾಗಿ ಕಾಣಿಸುತ್ತದೆ. ಇಯಾನ್ ಕೊಂಚ ಐ10 ಕಾರಿನ ಹೋಲಿಕೆ ಹೊಂದಿದೆ. ಎಂಟ್ರಿ ಲೆವೆಲ್ ಇಯಾನ್‍ನ ಪ್ರೀಮಿಯಂ ಲುಕ್ ಗ್ರಾಹಕರನ್ನು ಸೆಳೆಯುತ್ತದೆ. ಆದರೆ ಮಾರುತಿ ಮೇಲಿರುವ ನಂಬಿಕೆಯಿಂದಾಗಿ ಹೊಸ ಆಲ್ಟೊ ಖರೀದಿ ಭರಾಟೆಯೂ ಜೋರಾಗಿದೆ. ಆಲ್ಟೊ 800 ಮತ್ತು ಇಯಾನ್ ಕಾರನ್ನು ಅಕ್ಕಪಕ್ಕ ನಿಲ್ಲಿಸಿದರೆ ಇಯಾನ್ ಸೌಂದರ್ಯಕ್ಕೆ ಹೆಚ್ಚು ಅಂಕ ಕೊಡಬಹುದು. ಸ್ಯಾಂಟ್ರೊ ಮತ್ತು ಐ10ಗಿಂತಲೂ ಇಯಾನ್ ಅಂದವೆಂದು ಕೆಲವರು ಅಭಿಪ್ರಾಯಪಡುತ್ತಾರೆ.

ಕಾರಿನೊಳಗೆ ನೋಡಿ
ಪುಟ್ಟ ಕಾರು ಸೆಗ್ಮೆಂಟ್‍ನ ಎಂಟ್ರಿ ಲೆವೆಲ್ ಕಾರುಗಳಾದ ಇಯಾನ್‍ಮತ್ತು ಆಲ್ಟೊ ಸಿಟಿ ರಸ್ತೆಗೆ ಮಾತ್ರವಲ್ಲದೇ ಹೆದ್ದಾರಿ ಸವಾರಿಗೂ ಸೈ ಎನಿಸಿವೆ. ಆಲ್ಟೊ 800 ಒಳಭಾಗದ ಸ್ಥಳಾವಕಾಶ ತಕ್ಕಮಟ್ಟಿಗೆ ಸಾಕಾಗುವಂತೆ ಇದೆ. ಹೊಸ ವಿನ್ಯಾಸ ಮತ್ತು ಬಣ್ಣದ ಡ್ಯಾಷ್‍ಬೋರ್ಡ್, ನೂತನ ವಿನ್ಯಾಸದ ಕ್ಯಾಬಿನ್ ಇಷ್ಟವಾಗುತ್ತದೆ. ದ್ವಿಬಣ್ಣದ ಸೀಟುಗಳು ಸೇರಿದಂತೆ ಆಲ್ಟೊ ಕಾರಿನೊಳಗಿನ ವಿನ್ಯಾಸ ಸರಳವಾಗಿದೆ. ಎರಡೂ ಕಾರುಗಳು ಸಹ ದೊಡ್ಡದಾದ ಮತ್ತು ವಿಶಾಲವಾದ ಸೀಟುಗಳನ್ನು ಹೊಂದಿವೆ. ಇಯಾನ್ ಕಾರಿನ ಸ್ಪೋರ್ಟಿ ವಿನ್ಯಾಸದ ನೂತನ ಡ್ಯಾಷ್‍ಬೋರ್ಡ್ ವಿನ್ಯಾಸ ಅತ್ಯುತ್ತಮ. ಸೆಂಟ್ರಲ್ ಸ್ಪೀಡೊಮೀಟರ್ ಮತ್ತು ಡಿಜಿಟಲ್ ಫ್ಯೂಯೆಲ್ ಗೇಜ್ ಇರುವ ಇನ್ಸ್‍ಟ್ರುಮೆಂಟ್ ಕಾರಿನ ಅಂದ ಹೆಚ್ಚಿಸಿವೆ.  ಹೊರವಿನ್ಯಾಸಕ್ಕೆ ಹೋಲಿಸಿದರೆ ಇಯಾನ್ ಒಳಭಾಗ ಅದೇ ಗುಣಮಟ್ಟವನ್ನು ಹೊಂದಿಲ್ಲ.  ಆದರೂ ಇಯಾನ್ ಇಂಟಿರಿಯರ್ ಫಿಟ್ ಮತ್ತು ಫಿನಿಶ್ ಬೊಂಬಾಟ್.
ಆಲ್ಟೊ 800 ಕಾರಿನೊಳಗೆ ಕಷ್ಟಪಟ್ಟು ಐದು ಜನ ಕುಳಿತುಕೊಳ್ಳಬಹುದು.  ಇಯಾನ್ ಸ್ಥಳಾವಕಾಶ ಇದಕ್ಕಿಂತ ಕೊಂಚ ಹೆಚ್ಚಿದೆ. ಬೂಟ್ ಸ್ಥಳಾವಕಾಶದಲ್ಲೂ ಇಯಾನ್ ಮುಂದಿದೆ. ಇಯಾನ್ 215 ಲೀಟರ್ ಬೂಟ್ ಸ್ಥಳಾವಕಾಶ ಹೊಂದಿದೆ. ಆಲ್ಟೊ 800 ಕಾರಿನ ಬೂಟ್ ಸ್ಥಳಾವಕಾಶ ಕೇವಲ 177 ಲೀಟರ್‍ನಷ್ಟಿದೆ ಅಷ್ಟೇ. ಹೀಗಾಗಿ ಸ್ಥಳಾವಕಾಶದಲ್ಲಿ ಇಯಾನ್‍ಗೆ ಹೆಚ್ಚು ಅಂಕ ನೀಡಬಹುದು.

ಪವರ್
ಇಯಾನ್‍ಗೆ ಹೋಲಿಸಿದರೆ ಆಲ್ಟೊ 800 ಪವರ್ ಮತ್ತು ಟಾರ್ಕ್ ಉತ್ತಮವಾಗಿದೆ. ಪರಿಷ್ಕøತ ಎಫ್8ಡಿ ಎಂಜಿನ್ ಹೆಚ್ಚು ಟಾರ್ಕ್ ಪವರ್ ನೀಡುತ್ತದೆ. ಅಂದರೆ ಆಲ್ಟೊ 800 ಟಾರ್ಕ್ ಪವರ್ 3500 ಆವರ್ತನಕ್ಕೆ 69 ಎನ್‍ಎಂಗೆ ತಲುಪಿದೆ.(ಹಳೆ  ಆವೃತ್ತಿಗೆ ಹೋಲಿಸಿದರೆ ಶೇಕಡ 11ರಷ್ಟು ಹೆಚ್ಚಳ). ಪರಿಷ್ಕøತ ಎಂಜಿನ್ 6 ಸಾವಿರ ಆವರ್ತನಕ್ಕೆ 49 ಪಿಎಸ್ ಪವರ್ ನೀಡುತ್ತದೆ. ಇಯಾನ್ ಕಾರು 814 ಸಿಸಿಯ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 5,500 ಆವರ್ತನಕ್ಕೆ 56 ಪಿಎಸ್ ಪವರ್ ಮತ್ತು 4 ಸಾವಿರ ಆವರ್ತನಕ್ಕೆ 74.56 ಎನ್‍ಎಂ ಟಾರ್ಕ್ ಪವರ್ ನೀಡುತ್ತದೆ. ನಾಲ್ಕನೇ ಗೇರ್‍ನಲ್ಲಿ ಆಕ್ಸಿಲರೇಷನ್ ಪಡೆದುಕೊಳ್ಳಲು ಆಲ್ಟೊಗೆ 18.3 ಸೆಕೆಂಡ್ ಸಾಕು, ಆದರೆ ಇಯಾನ್‍ಗೆ 26 ಸೆಕೆಂಡ್ ಬೇಕು.
ರೈಡ್ ಗುಣಮಟ್ಟದಲ್ಲಿ ಆಲ್ಟೊ 800 ಕಾರು ಇಯಾನ್‍ನ್ನು ಹಿಂದಿಕ್ಕಿದೆ. 12 ಇಂಚಿನ ಅಪೆÇಲೊ ಟೈರ್ ರೈಡ್ ಗುಣಮಟ್ಟದ ಮುಂದೆ ಇಯಾನ್ ಕಾರಿನ 13 ಇಂಚಿನ ಟೈರ್ ಲೆಕ್ಕಕ್ಕಿಲ್ಲ.  ಮೆಕಾನಿಕಲ್ ವಿಷ್ಯದಲ್ಲಿ, ಕಾರ್ಯಕ್ಷಮತೆ, ರೈಡಿಂಗ್ ಮತ್ತು ಹ್ಯಾಂಡ್ಲಿಂಗ್ ವಿಷಯದಲ್ಲಿ ಇಯಾನ್‍ಗಿಂತ ಆಲ್ಟೊ ಬೆಸ್ಟ್.

ಮೈಲೇಜ್ ಎಷ್ಟು?

ಸಿಟಿ ರಸ್ತೆಯಲ್ಲಿ ಇಯಾನ್ ಪ್ರತಿಲೀಟರ್‍ಗೆ  ಸುಮಾರು 11 ಕಿ.ಮೀ. ಮೈಲೇಜ್ ನೀಡುತ್ತದೆ.  ಆಲ್ಟೊ  12.2 ಕಿ.ಮೀ. ಮೈಲೇಜ್ ನೀಡುತ್ತದೆ. ಇಯಾನ್ 32 ಲೀಟರ್ ಟ್ಯಾಂಕ್ ಹೊಂದಿದೆ. ಫುಲ್ ಟ್ಯಾಂಕ್ ಪೆಟ್ರೋಲ್ ಇದ್ದರೆ ನಿಶ್ಚಿಂತೆಯಿಂದ ಸುಮಾರು 352 ಕಿ.ಮೀ. ಪ್ರಯಾಣಿಸಬಹುದಾಗಿದೆ. ಆದರೆ ಆಲ್ಟೊ ಇಂಧನ ಟ್ಯಾಂಕ್ 35 ಲೀಟರ್‍ನದ್ದಾಗಿದ್ದು ಸುಮಾರು 427 ಕಿ.ಮೀ. ಪ್ರಯಾಣಿಸಬಹುದು. ಮೈಲೇಜ್ ವ್ಯತ್ಯಾಸ ಕಡಿಮೆಯಿದ್ದರೂ ಆಲ್ಟೊ ಸಿಟಿ ರಸ್ತೆಯಲ್ಲಿ ಹೆಚ್ಚು ಇಂಧನ ದಕ್ಷತೆ ನೀಡುತ್ತದೆ.

ಯಾವುದು ಉತ್ತಮ?
ಟಾಪ್ ಎಂಡ್ ಆವೃತ್ತಿಗಳನ್ನು ಹೋಲಿಸಿ ನೋಡೋಣ. ಏರ್‍ಬ್ಯಾಗ್ ಆಯ್ಕೆಯಿರುವ ಆಲ್ಟೊ 800 ಎಲ್‍ಎಕ್ಸ್‍ಐ ಕಾರಿನ ದರ ಸುಮಾರು 3.14 ಲಕ್ಷ ರುಪಾಯಿ ಇದೆ. ಹುಂಡೈ ಇಯಾನ್ ಸ್ಪೋಟ್ರ್ಸ್  ದರ ಸುಮಾರು 3.79 ಲಕ್ಷ ರುಪಾಯಿ ಇದೆ. ಇವು ಎಕ್ಸ್‍ಶೋರೂಂ ದರ. ಇಲ್ಲಿ ಇಯಾನ್ ದುಬಾರಿ. ಆದರೆ ಕಾರಿನಲ್ಲಿರುವ ಫೀಚರುಗಳನ್ನು ನೋಡಿದಾಗ ಇಯಾನ್ ದುಬಾರಿ ಎನಿಸದು. ಆಲ್ಟೊ 800 ಕಾರುಗಳಲ್ಲಿ ಫೀಚರುಗಳಿಗೆ ಬರಗಾಲವಿದೆ. ಆಶ್ಚರ್ಯವೆಂದರೆ ಆಲ್ಟೊ ಕಾರಿನ ಎಡ ಭಾಗದಲ್ಲಿ ಸೈಡ್ ಮಿರರೇ ಇಲ್ಲ. ಸೆಂಟ್ರಲ್ ಲಾಕಿಂಗ್ ಇಲ್ಲ. ಎಡಭಾಗದ ಡೋರ್ ಸ್ಪೋಟ್ರ್ಸ್ ಲುಕ್ ಹೊಂದಿಲ್ಲ.  ಸೌಂದರ್ಯ, ಫೀಚರುಗಳ ವಿಷಯದಲ್ಲಿ ಇಯಾನ್ ಉತ್ತಮ. ಆದರೆ ಮೆಕಾನಿಕಲ್ ವಿಷಯದಲ್ಲಿ ಆಲ್ಟೊ ಅತ್ಯುತ್ತಮ. ನಿಮ್ಮಲ್ಲಿ ಕೊಂಚ ದುಡ್ಡು ಕಡಿಮೆ ಇದ್ದರೆ ಆಲ್ಟೊ 800 ಖರೀದಿಸಬಹುದು. ಆದರೆ ಕೊಂಚ ಹೆಚ್ಚು ಪಾವತಿಸಲು ರೆಡಿ ಇದ್ದರೆ ಅಂದದ ಇಯಾನ್ ಖರೀದಿಸಬಹುದು.



ವಾಹನ ತಜ್ಞರ ಅಭಿಪ್ರಾಯ
ಹಳೆಯ ಆಲ್ಟೊ ಕಾರಿಗಿಂತ ನೂತನ ಆಲ್ಟೊ 800 ಉತ್ತಮ ಇಂಟಿರಿಯರ್ ಹೊಂದಿದೆ. ಸಾಲಿಡ್ ಎಂಜಿನ್, ಹ್ಯಾಂಡ್ಲಿಂಗ್, ಮೈಲೇಜ್, ಮರುಮಾರಾಟ ಮೌಲ್ಯ, ಏರ್‍ಬ್ಯಾಗ್ ಆಯ್ಕೆ, ಸರ್ವೀಸ್ ಜಾಲ ಇತ್ಯಾದಿ ವಿಷಯದಲ್ಲಿ ಆಲ್ಟೊ 800 ಖರೀದಿ ಉತ್ತಮ. ಆಕರ್ಷಕ ಫ್ಲೂಡಿಕ್ ವಿನ್ಯಾಸ, ಚಂದದ ಇಂಟಿರಿಯರ್, ಫೀಚರುಗಳು, ಸಾಧಾರಣ ಹ್ಯಾಂಡ್ಲಿಂಗ್, ಸಾಧಾರಣ ಮೈಲೇಜ್, ಪ್ರೀಮಿಯಂ ಕಾರಿನ ಲುಕ್ ಹೊಂದಿರುವುದು ಇತ್ಯಾದಿಗಳಿಂದ ಇಯಾನ್ ಇಷ್ಟವಾಗುತ್ತದೆ. ಎಂಜಿನ್, ದಕ್ಷತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವಿರಾದರೆ ಅಂದದ ಇಯಾನ್ ಕಾರು ಖರೀದಿ ಸೂಕ್ತ.
ಜಾಯ್ ಮಾರ್ಕ್, ಕಾರ್‍ಟಾಕ್ ಎಕ್ಸ್‍ಪರ್ಟ್

ಹೆಚ್ಚಿನ ಮಾಹಿತಿಗೆ: ಮಾರುತಿ ಸುಜುಕಿ
ಆಲ್ಟೊ 800
ಹುಂಡೈ
ಇಯಾನ್


* ಪ್ರವೀಣ ಚಂದ್ರ

No comments