ಎಫ್1 ಕಾರ್

Share:
ಚಿತ್ರಕೃಪೆ: ಇಂಟರ್ನೆಟ್
ಸಾಧಾರಣ ಕಾರುಗಳಿಗಿಂತ ಟ್ರ್ಯಾಕ್‍ನಲ್ಲಿ ವ್ರೋಂ...ವ್ರೋಂ..ಹೂಂಕರಿಸುತ್ತ ಸಾಗುವ ಎಫ್1 ಕಾರುಗಳು ಹೇಗೆ ಭಿನ್ನ? ಎಫ್1 ಕಾರುಗಳಿಗ್ಯಾಕೆ ಈ ಪರಿ ಗತ್ತು, ಠೀವಿ, ಗಾಂಭೀರ್ಯ, ಬೆರಗು ಬಿನ್ನಾಣ?



ನಮ್ಮ ರಸ್ತೆಯಲ್ಲಿರುವ ಕಾರುಗಳಿಗೂ ಫಾರ್ಮುಲಾ ಒನ್ ಕಾರುಗಳಿಗೂ ಇರುವ ಪ್ರಮುಖ ವ್ಯತ್ಯಾಸ ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವಂತಹ ವೇಗ. ನಮ್ಮ ಕಾರುಗಳ ಪ್ರಮುಖ ಬಿಡಿಭಾಗಗಳು ದೀರ್ಘಾಯುಷ್ಯ ಹೊಂದಿದ್ದರೆ ಈ ಯಮವೇಗದ ಕಾರುಗಳ ಟೈರ್, ಎಂಜಿನ್ ಆಯಸ್ಸು ಕೆಲವು ನೂರು ಕಿ.ಮೀ.ಯಷ್ಟೇ. ಎಫ್1 ಕಾರುಗಳ ಟೆಕ್ ಮಾಹಿತಿ ಇಲ್ಲಿದೆ.

ಛಾಸಿ: ಛಾಸಿಯನ್ನು ಎಫ್2 ಕಾರುಗಳ ಹೃದಯ ಎನ್ನಬಹುದು. ಆಧುನಿಕ ಕಾರುಗಳು ಮತ್ತು ವಿಮಾನಗಳಂತೆ ಇದರಲ್ಲಿ ಮಾನೊಕಾಕ್ ಛಾಸಿ ಇದೆ. ಅಂದ್ರೆ ಸಿಂಗಲ್ ಮೆಟಿರಿಯಲ್‍ನಿಂದ ನಿರ್ಮಿತ ಛಾಸಿ ಇದೆ. ಈ ಹಿಂದೆ ಅಲ್ಯುಮಿನಿಯಂನಿಂದ ನಿರ್ಮಿಸಲಾಗುತ್ತಿತ್ತು. ಆದರೆ ಈಗ ಹಗುರ ಸದೃಢ ಕಾರ್ಬನ್ ಫೈಬರ್‍ಗಳಿಂದ ನಿರ್ಮಿಸಲಾಗುತ್ತದೆ. ಕೇವಲ ಒಬ್ಬನೇ ಡ್ರೈವರ್ ಕುಳಿತುಕೊಳ್ಳಲು ಅನುವಾಗುವಂತೆ ಕಾಕ್‍ಪಿಟ್ ಇದರಲ್ಲಿದೆ. ಇಲ್ಲಿ ಚಾಲಕನಿಗೆ ಇಕ್ಕಟ್ಟಿನ ಸ್ಥಳಾವಕಾಶವಿರುತ್ತದೆ.

ಎಂಜಿನ್: ಆರಂಭದಲ್ಲಿ ಎಫ್1 ಕಾರುಗಳು 3 ಲೀಟರಿನ ವಿ10 ಎಂಜಿನ್ ಹೊಂದಿದ್ದವು. ಈಗ ಹೆಚ್ಚಾಗಿ 2.4 ಲೀಟರಿನ ವಿ8 ಎಂಜಿನ್ ಬಳಸಲಾಗುತ್ತಿದೆ. ಇದು ಸುಮಾರು 900 ಅಶ್ವಸಾಮಥ್ರ್ಯ ನೀಡುತ್ತದೆ. ಎಫ್1 ಕಾರುಗಳ ಎಂಜಿನನ್ನು ಪ್ರತಿ 500 ಮೈಲು ಸವಾರಿಗೊಮ್ಮೆ ರಿಬಿಲ್ಟ್(ಮರು ನಿರ್ಮಾಣ) ಮಾಡಬೇಕಾಗುತ್ತದೆ. ಅತ್ಯಧಿಕ ಆರ್‍ಪಿಎಂ ಬಳಕೆ, ಅತ್ಯಧಿಕ ವೇಗ ಮತ್ತು ಒತ್ತಡದಿಂದ ಚಲಾಯಿಸುವುದರಿಂದ ಎಂಜಿನ್‍ಗೆ ಕಡಿಮೆ ಆಯಸ್ಸು.

ಗಿಯರ್: ಎಂಜಿನ್‍ನ ಎಲ್ಲಾ ಶಕ್ತಿಗಳನ್ನು ಎಫ್1 ಕಾರಿನ ಹಿಂಭಾಗದ ಚಕ್ರಗಳಿಗೆ ರವಾನಿಸುವುದು ಟ್ರಾನ್ಸ್‍ಮಿಷನ್ ಕೆಲಸ.  ಎಫ್1 ಕಾರುಗಳಲ್ಲಿ ಕಳೆದ ಕೆಲವು ವರ್ಷಗಳಿಂದ 7 ಸ್ಪೀಡ್ ಗಿಯರ್ ಬಾಕ್ಸ್ ಜನಪ್ರಿಯತೆ ಪಡೆದಿದೆ. ನಮ್ಮಲ್ಲಿರುವ ಮಾಮೂಲಿ ಕಾರುಗಳಂತೆ ಇದರ ಗಿಯರ್ ಶಿಫ್ಟ್ ಮಾಡಲಾಗುವುದಿಲ್ಲ. ಸ್ಟಿಯರಿಂಗ್ ವೀಲ್‍ನಿಂದ ಕೊಂಚ ಹಿಂದೆ ಇರುವ ಪೆಡಲ್‍ಗಳಲ್ಲಿ ಗಿಯರ್ ಬದಲಾಯಿಸಲಾಗುತ್ತದೆ. ಆಟಿಕೆ ರೇಸ್ ಕಾರುಗಳಲ್ಲಿರುವ ಎಚ್ ಆಕಾರದ ಬಟನ್‍ಗಳಂತೆ ಇದರಲ್ಲೂ ಗಿಯರ್ ಬಟನ್‍ಗಳಿರುತ್ತವೆ.

ಏರೋ ಡೈನಾಮಿಕ್ಸ್: ಎಫ್1 ಕಾರುಗಳು ಅವುಗಳ ಎಂಜಿನ್‍ನಂತೆ ಏರೋ ಡೈನಾಮಿಕ್ಸ್ ವಿಶೇಷತೆಗಳಿಂದ ಜನಪ್ರಿಯವಾಗಿವೆ. ಯಾವುದೇ ವಾಹನ ಅತಿವೇಗದಲ್ಲಿ ಸಾಗುವಾಗ ಅದಕ್ಕೆ ಗಾಳಿ ತಡೆಯೊಡ್ಡುತ್ತದೆ. ಎಫ್1 ಕಾರಿನ ಮೂತಿ ಮತ್ತು ರೆಕ್ಕೆಗಳು ಗಾಳಿಯನ್ನು ಸೀಳುತ್ತ ಅತಿವೇಗದಲ್ಲಿ ಸಾಗಲು ಸಹಾಯಕವಾಗಿದೆ.
ವಿಮಾನದಲ್ಲಿರುವ ರೆಕ್ಕೆಗಳಂತೆ ಎಫ್1 ಕಾರುಗಳು ವಿಶೇಷ ರೆಕ್ಕೆಗಳನ್ನು ನೀವು ಗಮನಿಸಿರಬಹುದು. ವಿಮಾದ ರೆಕ್ಕೆಗಳು ಹಾರಲು ಸಹಕರಿಸಿದರೆ ಎಫ್1 ರೆಕ್ಕೆಗಳು ರಸ್ತೆಯನ್ನು ಅಂಟಿಕೊಂಡು ಚಲಿಸಲು ನೆರವಾಗುತ್ತವೆ.

ಸಸ್ಪೆನ್ಷನ್: ರಸ್ತೆಯಲ್ಲಿರುವ ಸಾಮಾನ್ಯ ಕಾರುಗಳಂತೆ ಎಫ್1 ಕಾರುಗಳ ಸಸ್ಪೆನ್ಷನ್ ಬಿಡಿಭಾಗಗಳಿರುತ್ತವೆ. ಅಂದರೆ ಸ್ಪ್ರಿಂಗ್, ಡ್ಯಾಂಪರ್ಸ್, ಆಮ್ರ್ಸ್ ಎಲ್ಲವೂ ಇವೆ. ಪ್ರಮುಖ ವ್ಯತ್ಯಾಸವೆಂದರೆ ಇವು ಡಬಲ್ ವಿಶ್‍ಬೋನ್ ಸಸ್ಪೆನ್ಷನ್ ಹೊಂದಿರುತ್ತವೆ. ಇದರ ಬ್ರೇಕ್‍ನ ವೈಶಿಷ್ಠ್ಯವೆಂದರೆ ಕಾರು 250 ಮೈಲು ವೇಗದಲ್ಲಿ ಸಾಗುವಾಗಲೂ ಗಕ್ಕನೆ ಬ್ರೇಕ್ ಹಾಕಿದಾಗಲೂ ದೃಢವಾಗಿ ನಿಲ್ಲುತ್ತದೆ.

ಟೈರ್: ಟೀವಿಯಲ್ಲಿ ಎಫ್1 ರೇಸ್ ನೋಡಿದ್ದರೆ ಅದರಲ್ಲಿ ಕ್ಷಣಾರ್ಧದಲ್ಲಿ ಟೈರ್ ಬದಲಾಯಿಸುವ ಪ್ರಕ್ರಿಯೆಗಳನ್ನು ಅಚ್ಚರಿಯಿಂದ ನೋಡಿರುತ್ತಿರಿ. ಕಾರು ತಾಂತ್ರಿಕವಾಗಿ ಎಷ್ಟೇ ಅತ್ಯುತ್ತಮವಾಗಿದ್ದರೂ ಅದಕ್ಕೆ ದಕ್ಷತೆಯ ಟೈರ್ ಬೇಕೆಬೇಕು. ಈಗಿನ ಎಫ್1 ಕಾರುಗಳ ಮುಂಭಾಗದ ಟೈರ್  12-15 ಇಂಚು ಅಗಲ ಮತ್ತು ಹಿಂಭಾಗದ ಟೈರ್‍ಗಳು 14-15 ಇಂಚು ಅಗಲ ಇರುತ್ತವೆ.  ಮೃದುವಾದ ಗುಣಮಟ್ಟದ ರಬ್ಬರ್ ಬಳಸಿ ಈ ಟೈರ್ ನಿರ್ಮಿಸಲಾಗುತ್ತದೆ. ಇವುಗಳನ್ನು ಕನಿಷ್ಠ 125 ಮೈಲು ಪ್ರಯಾಣಕ್ಕೊಮ್ಮ ಬದಲಾಯಿಸುವ ಅಗತ್ಯವಿದೆ.

ಸ್ಟಿಯರಿಂಗ್ ವೀಲ್: ನಮ್ಮ ರಸ್ತೆಯಲ್ಲಿರುವ ಮಾಮೂಲಿ ಕಾರುಗಳಿಗೆ ಹೋಲಿಸಿದರೆ ಎಫ್1 ಕಾರುಗಳ ಸ್ಟಿಯರಿಂಗ್ ವೀಲ್ ಕೊಂಚ ಭಿನ್ನವಾಗಿರುತ್ತದೆ. ಬಟನ್‍ಗಳು, ಸ್ವಿಚ್‍ಗಳು ಮತ್ತು ಕೆಲವೊಂದು ನಿಯಂತ್ರಣ ಗಿಯರ್‍ಗಳು ಇದರಲ್ಲಿರುತ್ತವೆ. ಚಾಲಕ ತುರ್ತು ಸಂದರ್ಭಗಳಲ್ಲಿ ಕಾರಿನಿಂದ 5 ಸೆಕೆಂಡಿನಲ್ಲಿ ಹೊರಕ್ಕೆ ಜಿಗಿಯಲು ಅನುವಾಗುವಾಂತೆ ಸ್ಟಿಯರಿಂಗ್ ವೀಲ್ ವಿನ್ಯಾಸವಿದೆ.


ನಿಮಗಿದು ಗೊತ್ತೆ?
* ಕೇವಲ ಎರಡು ಗಂಟೆಯ ರೇಸ್‍ನಲ್ಲಿ ಎಫ್1 ಕಾರಿನ ಎಂಜಿನ್ ಆಯಸ್ಸು ಮುಗಿಯುತ್ತದೆ. ನಮ್ಮ ರಸ್ತೆಯಲ್ಲಿ ಸಾಗುವ ಕಾರುಗಳ ಎಂಜಿನ್ ಬಾಳಿಕೆ ಸುಮಾರು 20 ವರ್ಷ ಇರುತ್ತದೆ.
* ಒಂದು ಎಫ್1 ಕಾರಿನಲ್ಲಿ ಅಂದಾಜು 80 ಸಾವಿರ ಬಿಡಿಭಾಗಗಳಿರುತ್ತವೆ.
*ಎಫ್1 ಕಾರಿನ ಸಾಮಾನ್ಯ ಆರ್‍ಪಿಎಂ 18ಸಾವಿರ. ಅಂದರೆ ಸೆಕೆಂಡಿಗೆ 300 ಬಾರಿ ಇದರ ಪಿಸ್ಟನ್‍ಗಳು ಚಲಿಸುತ್ತವೆ. ಸಾಮಾನ್ಯ ಕಾರುಗಳು ಗರಿಷ್ಠ 6 ಸಾವಿರ ಆರ್‍ಪಿಎಂವರಗೆ ಸಾಗುತ್ತದೆ.
* ಬ್ರೇಕ್ ಹಾಕಿದಾಗ ಇದರ ಡಿಸ್ಕ್ ಉಷ್ಣತೆ ಬರೋಬ್ಬರಿ ಸಾವಿರ ಡಿಗ್ರಿ ಸೆಲ್ಸಿಯಸ್‍ಗಿಂತಲೂ ಅಧಿಕವಾಗಿರುತ್ತದೆ.
* ಎಫ್1 ಕಾರಿನಲ್ಲಿರುವ ಕೇಬಲ್‍ಗಳ ಉದ್ದ ಸುಮಾರು 1 ಕಿಲೋಮೀಟರ್‍ನಷ್ಟಿರಬಹುದು. ಕಾರಿನ ನಿಯಂತ್ರಣ ಸೇರಿದಂತೆ ಹಲವು ಕಮಾಂಡ್‍ಗಳಿಗೆ ನೆರವು ನೀಡಲು ಸುಮಾರು 100 ಕ್ಕೂ ಹೆಚ್ಚು ಸೆನ್ಸಾರ್‍ಗಳು ಇರುತ್ತವೆ.
*ಎಫ್1 ಕಾರುಗಳು ಕೇವಲ ನಾಲ್ಕು ಸೆಕೆಂಡಿನಲ್ಲಿ 0-160 ಕಿ.ಮೀ. ವೇಗ ಪಡೆಯುತ್ತವೆ.
* ಎಫ್1 ಕಾರಿನ ತೂಕ ಸುಮಾರು 550 ಕೆ.ಜಿ. ಇದೆ.
* ಹೆಚ್ಚಿನ ಎಫ್1 ಕಾರುಗಳ ಟೈರ್‍ಗಳಿಗೆ ನೈಟ್ರೊಜನ್ ತುಂಬಿಸಿಡಲಾಗುತ್ತದೆ. ಸಾಮಾನ್ಯ ಗಾಳಿಗೆ ಹೋಲಿಸಿದರೆ ನೈಟ್ರೊಜನ್ ಹೆಚ್ಚು ಒತ್ತಡ ತಾಳಿಕೊಳ್ಳುವ ಶಕ್ತಿ ಹೊಂದಿದೆ.
* ರೋಡ್ ಕಾರುಗಳ ಟೈರ್‍ಗಳು ಸುಮಾರು 60 ಸಾವಿರದಿಂದ 1 ಲಕ್ಷ ಕಿ.ಮೀ.ವರೆಗೆ ಚಲಿಸುತ್ತವೆ. ಆದರೆ ರೇಸಿಂಗ್ ಕಾರುಗಳ ಬಾಳಿಕೆ ಕೇವಲ 90ರಿಂದ 120 ಕಿ.ಮೀ. ಅಷ್ಟೆ!
* ಒಂದು ಸೆಕೆಂಡಿನಲ್ಲಿ ಇದಕ್ಕೆ 12 ಲೀಟರ್ ಇಂಧನ ತುಂಬಿಸಬಹುದು.
* ಕೇವಲ 3 ಸೆಕೆಂಡಿನಲ್ಲಿ ಎಫ್1 ಕಾರಿಗೆ ಇಂಧನ ತುಂಬಿಸಬಹುದು ಮತ್ತು ಟೈರ್ ಬದಲಾವಣೆ ಮಾಡಬಹುದು.


No comments