ಏನಿದು ಕಚಗುಳಿ?

Share:

ಎಡಭಾಗದ ಕರ್ಣ ಪಟಲ, ಕೊರಳಿನ ಎಡಭಾಗ, ಎಡಭಾಗದ ಭುಜದಲ್ಲಿ ಅರ್ಥವಾಗದ ಹೊಸ ಕಚಗುಳಿಯೊಂದು ಆರಂಭವಾಗಿದೆ. ಎಡಭಾಗದ ಕಿವಿಯ ಆಸುಪಾಸಿನಲ್ಲಿ ಆರಂಭವಾಗಿ ನರನಾಡಿಯೆಲ್ಲ ಪ್ರವೇಶಿಸಿ ಮೈತುಂಬಾ ವ್ಯಾಪಿಸಿ ಅತೀವ ಸಂತೋಷ,  ಅವರ್ಚನೀಯ ಆನಂದ ನೀಡುತ್ತಿದೆ.

ಯಾವಾಗಲೂ ಅಲ್ಲ. ಯಾವುದೇ ಜಂಜಾಟಗಳಿಲ್ಲದಾಗ, ಕೊಂಚ ಫ್ರೀಯಾಗಿದ್ದಾಗ ಕಿವಿ ಸುತ್ತ ಕಪ್ಪು ಪಟ್ಟೆಗಳಿರುವ ಬಣ್ಣದ ಚಿಟ್ಟೆಯೊಂದು ಹಾರಿ ಕಚಗುಳಿಯಿಟ್ಟಂತೆ ಭಾಸವಾಗುತ್ತಿತ್ತು. ಈ ಅನುಭವ ಆರಂಭವಾಗಿ ಹೆಚ್ಚು ದಿನಗಳಾಗಿಲ್ಲ. ಅಂದಿನಿಂದ ಸುಂದರ ಕನಸುಗಳು ಬೀಳತೊಡಗಿವೆ. ಹೂವಿನ ಲೋಕದಲ್ಲಿ ಒಬ್ಬನೇ ಸುತ್ತಾಡಿದಂತೆ.. ಅಲ್ಲಿದ್ದ ಮುದ್ದಾದ ಹೂವೊಂದು ಎದ್ದುಬಂದು "ಗುಟ್ಟೊಂದ ಹೇಳುವೆ' ಎಂದು ಕಿವಿಬಳಿ ಉಸುರಿದಂತೆ....

ಯಾಕೆ ಹೀಗೆ?
ಏನಾಗಿದೆ ನನಗೆ?
ಯಾಕೀ ಅನುಭವ...?


ಆಕಾಶದಲ್ಲಿ ಜೆಟ್ ವಿಮಾನದಲ್ಲಿ ಸಂಚರಿಸುವ ದೇವತೆಗಳು ಒಮ್ಮೆ ಲ್ಯಾಂಡ್ ಆಗಿ ನನ್ನ ಎಡ ಭುಜ ಸವರಿ ಹೋಗಿರಬಹುದೇ? ನನ್ನ ದೇಹದ ಈ ಭಾಗಗಳಲ್ಲಿ ಅತೀತ, ಅತಿಮಾನುಷ ಶಕ್ತಿಗಳ್ಯಾವುದೋ ಪ್ರವೇಶಿಸಿರಬಹುದೇ? ಯಾವುದೋ ಮಧುರತೆಯ ಆಗಮನದ ಸೂಚನೆಯೇ? ಅಥವಾ ಯಾವುದಾದರೂ ಭೀಕರ ರೋಗ ಆರಂಭವಾಗುವ ಮುನ್ಸೂಚನೆಯೇ?!

ಭೂತ ಪ್ರೇತದ ಚೇಷ್ಠೆಯೂ ಆಗಿರಬಹುದು. ಊರಿಗೆ ಹೋದರೆ ಕವಡೆ ಹಾಕುವ ಅಪ್ಪಣ್ಣನ ಬಳಿ ಕೇಳಬೇಕು. ಆತನ ತಲೆಯೊಳಗೆ ತುಂಬಿರುವ ಪ್ರೇತಗಳಲ್ಲಿ ಯಾವುದಕ್ಕಾದರೂ ಇಂತಹ ಎಡಭಾಗಕ್ಕೆ ಕಚಗುಳಿ ನೀಡುವ ಶಕ್ತಿಯೂ ಇರಬಹುದು. ಆದರೆ ಅಪ್ಪಣ್ಣನ ಬಳಿ ಹೋದರೆ ಏನಾದೀತು.. ಎಲೆಯಡಿಕೆ ತುಂಬಿದ ಬಾಯಲ್ಲೇ ಎಂಜಲು ಚಿಮುಕಿಸುತ್ತ ಗಹಿಗಹಿಸಿ ನಗಬಹುದು...

ಅಥವಾ ಈಗ ಗೊತ್ತಾಯ್ತ ಪ್ರವೀಣಾ ಅಂತ ಅಣಕಿಸಬಹುದು. ಯಾಕೆಂದರೆ, ಭೂತವಿಲ್ಲ. ಪಿಶಾಚಿಯಿಲ್ಲ, ಪ್ರೇತವಿಲ್ಲ... ಎಂದು ಈ ಹಿಂದೆ ಅವನ ಬಳಿ ಸಾಕಷ್ಟು ಸಲ ವಾದಿಸಿದ್ದೆ.

ಯಾವುದಾದರೂ ಇಎನ್ ಟಿ ಡಾಕ್ಟರ್ ಬಳಿಗೆ ಹೋದರೆ ಹೇಗೆ...?

ಆದರೆ ಅವರಲ್ಲಿ ಏನಂತ ಹೇಳುವುದು. ಯಾವುದೇ ತುರಿಕೆಯಿಲ್ಲ. ಏನಾದರೂ ಸಮಸ್ಯೆಯಿದ್ದರೆ ತಾನೇ ಅವರ ಬಳಿ ಹೋಗಬೇಕು. ಅದುಬಿಟ್ಟು, ನನ್ನ ಎಡಭಾಗದ ಭುಜ, ಕೊರಳು, ಕರ್ಣ ಪಟಲದಲ್ಲಿ ಪುಳಕವಾಗುತ್ತಿದೆ ಎಂದರೆ ಅವರು ನಕ್ಕರು. ಅವರು ನಗದಿದ್ದರೂ ಆ ಆಸ್ಪತ್ರೆಯಲ್ಲಿರುವ ನರ್ಸುಗಳಾದರೂ ಪಿಸಪಿಸ ನಗುವುದಂತೂ ಗ್ಯಾರಂಟಿ.

ಆದರೆ ಇದು ಡಾಕ್ಟರ್ ಬಳಿ ಹೋಗುವಂತಹ ಪ್ರಾಬ್ಲಂ ಅಲ್ಲವಲ್ಲ. ಹಸಿ ಹುಲ್ಲಿನಿಂದ ಕಿವಿ ಸವರಿದಂತೆ ಮಧುರ ಅನುಭವ. ಕೊರಳಿನ ಬಳಿ ಮುದ್ದು ಕರುವೊಂದು ಉಸಿರುಬಿಟ್ಟಂತೆ ಆಪ್ತ ಭಾವ... ಮುದ್ದು ಕರು ಅಂದಾಗ ನೆನಪಾಗುತ್ತಿದೆ...

ನಾನು ಸಣ್ಣವನಿದ್ದಾಗ ಮನೆಯಲ್ಲಿದ್ದ ಪುಟ್ಟ ಕರುವಿನ ಮುಖವನ್ನು ಅಪ್ಪಿ ಹಿಡಿಯುತ್ತಿದ್ದೆ. ಅದು ಗೊಸ ಗೊಸ ಉಸಿರುಬಿಟ್ಟಾಗ ಮೈತುಂಬಾ ಒಂಥರಾ ಆಗುತ್ತಿತ್ತು. ಆದರೆ ಆ ಕರು ದೊಡ್ಡದಾಗಿ, ಮತ್ತೆ ಹಲವು ಕರುಗಳಿಗೆ ತಾಯಿಯಾಗಿ ದನಕರುಗಳ ದೊಡ್ಡ ತಲೆಮಾರನ್ನೇ ಸೃಷ್ಟಿಸಿ ಮರೆಯಾಗಿದೆ.. ಆ ನೆನಪಿನ ಕಚಗುಳಿ ಇದಾಗಿರಲಿಕ್ಕೆ ಸಾಧ್ಯವಿಲ್ಲ.

ಹಾಗಂತ ಕಷ್ಟಬಂದರೆ ಮಾತ್ರ ಕಾರಣ ಹುಡುಕಬಾರದು. ಸಂತೋಷಕ್ಕೂ ಕಾರಣ ಹುಡುಕಲೇಬೇಕು. ಯಾವುದಾದರೂ ಸಣ್ಣ ಎಳೆಯೊಂದು ಸಿಕ್ಕರೆ ಅದರ ಜಾಡು ಹಿಡಿದು ಹೋಗಬೇಕು. ಪತ್ತೆದಾರಿ ಕಾದಂಬರಿಗಳಲ್ಲಿ ಹೀಗೆಯೇ ತಾನೇ... ಸಣ್ಣ ಕ್ಲೂ ಮೂಲಕ ದೊಡ್ಡ ಘಟನೆಗೆ ಪ್ರವೇಶಿಸುವುದು. ನಮ್ಮ ಪೊಲೀಸರು ಸಹ ಸಣ್ಣ ಎಳೆಯ ಜಾಡುಹಿಡಿದು ದೊಡ್ಡ ದೊಡ್ಡ ಪ್ರಕರಣಗಳನ್ನು ಹಿಡಿದಿದ್ದಾರೆ.

ನಮ್ಮೂರಿನ ಜೇನು ಹಿಡಿಯುವ ನಾರ್ಣ ಕೂಡ ಹೀಗೆನೇ. ಆತನ ಕಣ್ಣಿಗೆ ಒಂದು ಜೇನೋಣ ಕಂಡರೆ ಸಾಕು. ಅದರ ಹಿಂದೆಯೇ ಸಾಗುತ್ತಿದ್ದ. ಕೊನೆಗೆ ದೊಡ್ಡ ಜೇನು ಗೂಡಿನೊಂದಿಗೆ ವಾಪಸ್ ಬರುತ್ತಿದ್ದ. ಚಿಕ್ಕದಿರುವಾಗ ನಮ್ಮ ಪಾಲಿಗೆ ಅದು ಅಚ್ಚರಿ. ಜೇನು ಹಿಡಿಯುವ ನಾರ್ಣನೆಂದರೆ ಬೆರಗು.

ಆದರೆ ನನ್ನ ಕಿವಿಯ ಸುತ್ತ ಪುಳಕ ನೀಡುವ ಈ ಜೇನೋಣ ಯಾವುದು. ಮನಸ್ಸು ಪೂರ್ತಿ ಜೇನಿನ ಸವಿ ನೀಡುವ ಈ ಕಚಗುಳಿ ಹಿಂದಿನ ರಹಸ್ಯವಾದರೂ ಏನು...

ನಾನು ಸಣ್ಣವನಿದ್ದಾಗ ಕಿವಿಗೆ ಬಂಗಾರದ ಟಿಕ್ಕಿ ಹಾಕಿದ್ದರು. ಅದನ್ನು ಪುತ್ತೂರಿನ ಮುಳಿಯ ಭಟ್ಟರ ಅಂಗಡಿಯಿಂದ ಖರೀದಿಸಿದ್ದು. ಅವರು ಚೂಪಾದ ಸೂಜಿಯಂತಹ ವಸ್ತುವಿನಿಂದ ಕಿವಿ ತೂತು ಮಾಡಲು ಬಂದಾಗ ಭಯವಾಯಿತು. ಆದರೆ ಚಿನ್ನದ ಟಿಕ್ಕಿ ಕಿವಿಗೆ ಹಾಕುವ ಖುಷಿಯಿಂದ ಕಣ್ಮುಚ್ಚಿ ಕುಳಿತ್ತಿದ್ದೆ. ಇರುವೆ ಕಡಿದಾಂಗೆ ನೋವಾಗಿತ್ತು. ಕಣ್ಣು ತೆರೆದು ಕನ್ನಡಿ ಮುಂದೆ ನಿಂತಾಗ ಕಿವಿಯಲ್ಲಿ ಟಿಕ್ಕಿ ಮಿನುಗುತ್ತಿತ್ತು.

ಕಿವಿಗೆ ಚಿನ್ನ ಹಾಕಿದ ಖುಷಿ ಒಂದು ದಿನ ಮಾತ್ರ ಇತ್ತು. ಯಾಕೆಂದರೆ ಕಿವಿ ತೂತು ಮಾಡಿದ ಸ್ಥಳ ವೃಣವಾಗಿ ಸೋರ ತೊಡಗಿತು. ಆದರೂ ಒಂದೆರಡು ವಾರದಲ್ಲಿ ಕಿವಿ ಗುಣವಾಗಿ ಚಿಕ್ಕ ಚಿನ್ನದ ಟಿಕ್ಕಿ ಹಾಕಿದ ಹುಡುಗನಾಗಿದ್ದೆ. ಆದರೆ ಒಂದೆರಡು ತಿಂಗಳಲ್ಲಿ ಜಳಕ ಮಾಡುವಾಗ ಆ ಟಿಕ್ಕಿ ಕಳೆದುಕೊಂಡಿದ್ದೆ. ಆ ಟಿಕ್ಕಿಗಾಗಿ ಮಾಡಿದ ಕಿವಿಯ ತೂತಿಗೂ ಈಗಿನ ಈ ಕಚಗುಳಿಗೂ ಸಂಬಂಧವಿರಲಿಕ್ಕಿಲ್ಲ.

ಅಥವಾ ಇದು ಆ ನೆನಪಾಗಿರಬಹುದೇ..? ನಾನು ಪ್ರೈಮರಿಯಲ್ಲಿದ್ದಾಗ ಶೇಷಮ್ಮ ಟೀಚರ್ ಸಾಕಷ್ಟು ಸಲ ಕಿವಿ ಹಿಂಡಿದ್ದರು. ಆದರೆ ಅವರು ತಪ್ಪು ಮಾಡಿದಾಗ ಮಾತ್ರ ಕಿವಿಹಿಂಡುತ್ತಿದ್ದರು. ಆದರೆ ತಪ್ಪುಗಳನ್ನು ಮಾಡದೆ ತುಂಬಾ ದಿನವಾಯ್ತಲ್ಲ. ಹೀಗಾಗಿ ಈ ಎಡಭಾಗದ ಕಿವಿ, ಕೊರಳು ಪುಳಕಕ್ಕೂ ಅದಕ್ಕೂ ಸಂಬಂಧವಿರುವುದು ಸಾಧ್ಯವಿಲ್ಲ.

ಮತ್ಯಾಕೆ ಈ ಕಚಗುಳಿ. 
ಕಿವಿ ಸುತ್ತ ಬಣ್ಣದ ಓಕುಳಿ. 
ಮನದ ತುಂಬಾ ಚಂದದ ರಂಗವಳ್ಳಿ. 
ಭುಜದ ತುಂಬಾ ಆಪ್ತತೆ. ಕೊರಳ ಭಾಗದಲ್ಲಿ ಪುಳಕ. ಯಾವುದೋ ಅವರ್ಚನಿಯ ಆನಂದ. ಮನದಲ್ಲಿ ಭಾವೋತ್ಕರ್ಷ. 

ಓಹ್, ಕಾರಣ ಸಿಕ್ತು. ನಂಗೆ ಆಗಲೇ ಕಾರಣ ಗೊತ್ತಾಗಿತ್ತು. ಆದರೆ ಹೇಳುವುದು ಹೇಗೆ... ಇಷ್ಟೇಲ್ಲ ಪ್ರಲಾಪಿಸಿಕೊಂಡು ಹೇಳದಿದ್ದರೆ ಅದು ಅಪರಾಧವಾಗಬಹುದು. ಹೀಗಾಗಿ ಹೇಳಿಬಿಡುತ್ತೇನೆ. ನನ್ನ ಎಡಕಿವಿಯ ಸುತ್ತಮುತ್ತ, ಕೊರಳಿನ ಮತ್ತು ಭುಜದ ಎಡಭಾಗದಲ್ಲಿ ಹಸಿ ಹುಲ್ಲಿನ ಗರಿಗಳು ತಾಗಿದಂತೆ ನೀಡುವ ಆಪ್ತತೆ ನೀಡಿದ ಸಂಗತಿ ಯಾವುದು ಗೊತ್ತೆ??

ಅದು.. ಅದು... ಅದೊಂದು ಶುಭ ದಿನ

ಅಂದು ತುಂಬಾ ಬಿಸಿಲಿತ್ತು. ಕುಳಿತುಕೊಳ್ಳಲು ಸೀಟಿಲ್ಲ. ಅಷ್ಟೊಂದು ಜನ ಸೇರಿಬಿಟ್ಟಿದ್ದರು. ಅನಿವಾರ್ಯವಾಗಿ ಗಂಟೆಗಟ್ಟಲೆ ನಿಲ್ಲಬೇಕಿತ್ತು. ನಾನಾದರೂ ನಿಲ್ಲಬಲ್ಲೆ. ಪಾಪ ಪಕ್ಕದಲ್ಲಿರುವ ಗೆಳತಿಯ ಮುಖ ನೋಡಿದೆ. ಆಕೆ ಗಟ್ಟಿಗಿತ್ತಿ! ಬಿಸಿಲಿಗೆ ಮುಖ ಕೆಂಪಾಗಿದ್ದಾರೂ ದೃಢವಾಗಿ ನಿಂತಿದ್ದಳು.

ಆದರೆ ಆ ಒಂದು ಕ್ಷಣ ಮಾತ್ರ

ತನ್ನ ಚಿಕ್ಕ ಜಡೆಯ ಪುಟ್ಟ ತಲೆಯನ್ನು ನನ್ನ ಭುಜಕ್ಕೆ ಒರಗಿಸಿದಳು.

ಆದರೆ ಅದು ಕೇವಲ ಎರಡೇ ಎರಡು ಸೆಕೆಂಡು. ಮೊನ್ನೆ ರಷ್ಯಾಕ್ಕೆ ಕೆಲವೇ ಸೆಕೆಂಡ್ ಉಲ್ಕೆ ಅಪ್ಪಲಿಸಿದ ಹಾಗೆ, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆಕೆ ಭುಜಕ್ಕೆ ತಲೆಯಾನಿಸಿ ಏನೂ ಆಗದವಳಂತೆ ನೇರ ನಿಂತಿದ್ದಳು.

ಆ ಕ್ಷಣ ಅದನ್ನು ಸಹಜವಾಗಿ ಸ್ವೀಕರಿಸಿ ಮರೆತರೂ ಕಚಗುಳಿಯ ಮೂಲಕ ಕಾಡಲಾರಂಬಿಸಿದೆ.

ಈ ಪ್ರಥಮ ಕಚಗುಳಿ ನಾನೂ ಮರೆಯಲು ಪ್ರಯತ್ನಿಸಿದರೂ ಎಡಕಿವಿ, ಎಡಕೊರಳು, ಎಡಭುಜ ಆಗಾಗ ನೆನಪಿಸುತ್ತಿದೆ. ವಾಹ್, ಅದು ನನ್ನ ಬಾಳಿನ ಮರೆಯಲಾಗದ ಸೆಕೆಂಡುಗಳು... ನನ್ನ ಫಸ್ಟ್ ಕಚಗುಳಿ ;-)

(ವಿ.ಸೂ: ಇದು ಸಂಪೂರ್ಣ ಕಾಲ್ಪನಿಕ)



1 comment: