ಚಿಮಿಣಿ ನೆನಪು: ನಾಸಿಕದೊಳಗೆ ಮಸಿ

Share:
ಮೆತ್ತನೆಯ ಹಾಸಿಗೆ ಮೇಲೆ ಅಂಗಾತ ಬಿದ್ದುಕೊಂಡು, ಮೃದುವಾದ ದಿಂಬಿಗೆ ಮೊಣಕೈಗಳನ್ನು ಊರಿಕೊಂಡು ಲ್ಯಾಪ್ಟಾಪ್ನಲ್ಲಿ ಬರೆಯುತ್ತಿದ್ದಾಗ ಕರೆಂಟ್ ಹೋಯಿತು. ಸುತ್ತಲೂ ಕತ್ತಲು, ಲ್ಯಾಪ್ಟಾಪ್ ಬೆಳಕು ಮಿಣ ಮಿಣ ಮಿಣುಗುತ್ತಿತ್ತು. ನನಗೆ ಚಿಮಣಿ ದೀಪದ ಆ ದಿನಗಳು ನೆನಪಾದವು.

ನಡುರಾತ್ರೆ ಮೆಲ್ಲಗೆ ಮುಖದಿಂದ ಬೆಡ್ ಷೀಟ್ ತೆಗೆದು ನೋಡುತ್ತಿದ್ದೆ. ಕೈನಲ್ಲಿ ಸೀಮೆ ಎಣ್ಣೆ ದೀಪ ಹಿಡಿದುಕೊಂಡು ಅಮ್ಮ ನಿದ್ದೆಗಣ್ಣಿನಲ್ಲಿ ಕತೆ ಪುಸ್ತಕ ಓದುತ್ತಿದ್ದಳು. ಎಲ್ಲಾದರೂ ಓದುತ್ತ ನಿದ್ದೆ ಬಂದು  ಕೈನಲ್ಲಿದ್ದ ದೀಪ ಮೇಲಕ್ಕೆ ಬಿದ್ದರೇನು ಗತಿ! ತಕ್ಷಣ ಕೋಪದಿಂದ "ಯಾವ್ ಜೆಪ್ಪುಲೆಮ್ಮ'(ಸಾಕು ನಿದ್ದೆ ಮಾಡು ಅಮ್ಮ) ಅನ್ನುತ್ತಿದ್ದೆ.


ಪಿಯುಸಿಯಲ್ಲಿರುವಾಗ ನಾನೂ ಹಾಗೆಯೇ ಓದಲು ಶುರು ಮಾಡಿದ್ದೆ. ಲೈಬ್ರೆರಿಯಿಂದ ಕಾದಂಬರಿ ತರೋದು. ನಡುರಾತ್ರಿ ತನಕ ಇಹವನ್ನೇ ಮರೆತಂತೆ ಓದೋದು. ಆಗ ಸಾಕು ಮಲಗು ಅನ್ನತ್ತಿದ್ದವಳು ಅಮ್ಮ. ಹಾಗೆ ಚಿಮಿಣಿ ದೀಪವಿಡಿದು ನಿದ್ದೆಗಣ್ಣಿನಲ್ಲಿ ಓದಿ ತರಾಸು ಕಾದಂಬರಿಯೊಂದರ ಎರಡು ಪುಟ ಸುಟ್ಟಿದ್ದೆ. ಭಯದಿಂದ ಆ ಎರಡು ಪುಟಗಳನ್ನು ಕಿತ್ತು ತೆಗೆದು ಲೈಬ್ರೆರಿಯನ್ ಗೆ ನೀಡಿದ ಪಾಪ ಪ್ರಜ್ಞೆ ಇನ್ನೂ ಮನಸ್ಸಿನಿಂದ ದೂರವಾಗಿಲ್ಲ.

ಪರೀಕ್ಷೆಗೆ ಕೆಲವು ದಿನಗಳಿರುವಾಗ ರೇಡಿಯೊ ರಾತ್ರಿಯ ಕೊನೆಯ ಇಂಗ್ಲಿಷ್ ವಾರ್ತೆ ಮುಗಿಸಿ ಕುಂಯ್ ಅನ್ನುವರೆಗೆ ಓದುತ್ತಿದ್ದೆ. ಒಂದು ಕೈನಲ್ಲಿ ಪಾಠ ಪುಸ್ತಕ. ಮತ್ತೊಂದು ಕೈನಲ್ಲಿ ಚಿಮಣಿ ದೀಪ. ಸುತ್ತಲೂ ಕತ್ತಲು. ಕಿಟಕಿ ಹೊರಗೆ ನೋಡಿದಾಗ ಸತ್ತ ಅಜ್ಜಿಯ ನೆನಪಾದರೆ ಭಯದಿಂದ ದೀಪಕ್ಕೆ ಫೂ.. ಎಂದು ಊದಿ ಗುಡಿಯೊದ್ದು ನಿದ್ದೆ ಮಾಡುತ್ತಿದ್ದೆ.

ಬಹುಶಃ ಅದು ಚಂದಮಾಮದಲ್ಲಿ ಓದಿದ ಕತೆಯಾಗಿರಬೇಕು. ಒಬ್ಬಳು ಅಮ್ಮ ಇಲ್ಲದ ಹುಡುಗಿ. ಚಿಕ್ಕಮ್ಮನ ಕಾಟದಲ್ಲಿಯೂ ಶಾಲೆಗೆ ಹೋಗುತ್ತಿದ್ದಳು. ಇವಳು ರಾತ್ರಿ ಪಾಠ ಓದಲು ಕುಳಿತರೆ ಚಿಕ್ಕಮ್ಮ ಬಯ್ಯುತ್ತಿದ್ದಳು. ಇವಳು ಓದಿ ದೀಪದ ಸೀಮೆ ಎಣ್ಣೆ ಮುಗಿಸುತ್ತಾಳೆ ಅನ್ನೋದು ಆ ಚಿಕ್ಕಮ್ಮನ ದೂರು. ಆ ಹುಡುಗಿಯನ್ನು ನೆನಪಿಸಿಕೊಂಡರೆ ನನಗೆ ಅಯ್ಯೋ ಪಾಪ ಎಣಿಸುತ್ತಿತ್ತು.

ನನ್ನ ಸಂಬಂಧಿಕರಾದ ಅಜ್ಜರೊಬ್ಬರು ಮಗ ಕಟ್ಟಿದ ಹೊಸ ಟೇರಸಿ ಮನೆಯಲ್ಲಿ ಮಲಗಿಯೇ ಇಲ್ಲವಂತೆ. ಅವರು ಚಿಮಿಣಿ ದೀಪವಿರುವ ಹಳೆಯ ಮನೆಯಲ್ಲಿಯೇ ಮಲಗುತ್ತಿದ್ದರು.

ಕರೆಂಟ್ ಬಂತು. ಸದ್ಯಕ್ಕೆ ಚಿಮಿಣಿ ದೀಪ ನೆನಪು ಸಾಕು...

ನನಗೆ ಏನೋ ನೆನಪಾದಂತಾಗಿ ಮೂಗಿನೊಳಗೆ ಬೆರಳು ಹಾಕಿ ನೋಡಿದೆ. ನಾಸಿಕದೊಳು ಮಸಿ ಇಲ್ಲ. ಬೆರಳು ಆಘ್ರಾಣಿಸಿ ನೋಡಿದೆ. ಸೀಮೆ ಎಣ್ಣೆ ವಾಸನೆ ಇಲ್ಲ.

- ಪ್ರವೀಣ ಚಂದ್ರ

No comments